ಹೆಣ್ಣನ್ನು ಅತಿಯಾಗಿ ಗೌರವಿಸುತ್ತಲೇ ಹೆಣ್ಣು ಜೀವಕ್ಕೆ ಬಾಗಿಲುಗಳನ್ನೂ ಮುಚ್ಚಲಾಗುತ್ತಿದೆಯೇ ?
- ನಾ ದಿವಾಕರ
ಹೆಣ್ಣನ್ನು ಅತಿ ಹೆಚ್ಚು ಗೌರವಿಸುವ ಪುಣ್ಯ ಭೂಮಿ ಭಾರತ ಎಂದು ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತೇವೆ. ಶತಮಾನಗಳ ಇತಿಹಾಸ, ಪುರಾಣ ಕಥನ, ಮಿಥ್ಯೆಗಳಲ್ಲೂ ಸಹ ಇದನ್ನು ಗುರುತಿಸುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಮತ್ತು ಜೀವನೋಪಾಯದ ಮಾರ್ಗಗಳನ್ನು ಹಸನುಗೊಳಿಸಲು 75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ನೂರಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. “ ಬೇಟಿ ಬಚಾವೋ ಬೇಟಿ ಪಢಾವೋ “ ಇತ್ತೀಚಿನ ಒಂದು ಘೋಷಣೆ. ಒಂದರ್ಥದಲ್ಲಿ ನೋಡಿದಾಗ ಸ್ವತಂತ್ರ ಬಂದು 75 ವರ್ಷಗಳ ನಂತರವೂ ನಮ್ಮ ಘೋಷಣೆಯಲ್ಲಿ “ಹೆಣ್ಣುಮಕ್ಕಳನ್ನು ಉಳಿಸಿ” ಎಂಬ ಪದಗಳು ಇರುವುದೇ ಚೋದ್ಯ ಎನಿಸುವುದಿಲ್ಲವೇ ? ಯಾವುದರ ಉಳಿವು ಅಪಾಯದಲ್ಲಿದೆಯೋ ಅದನ್ನು ಉಳಿಸಿ ಎನ್ನುವುದು ಸಹಜ, ಉದಾಹರಣೆಗೆ ಪರಿಸರ, ಜಲಸಂಪತ್ತು ಇತ್ಯಾದಿ. ಆಳುವ ವರ್ಗಗಳಿಗೆ ಹೆಣ್ಣುಮಕ್ಕಳನ್ನು ಉಳಿಸುವ ಆಲೋಚನೆ ಬಂದಿರುವುದೇ ನಮ್ಮ ಪ್ರಜಾಪ್ರಭುತ್ವದ-ಸಮಾಜದ ಬೃಹತ್ ಸೋಲು ಎಂದೇ ಹೇಳಬೇಕಾಗುತ್ತದೆ.
ಹೆಣ್ಣು ಮಕ್ಕಳನ್ನು ಉಳಿಸಲು ಶಿಕ್ಷಣ ನೆರವಾಗುತ್ತದೆ ಎನ್ನುವುದು ನಿಸ್ಸಂದೇಹ ಸತ್ಯ. ಉಳಿಸುವುದು ಯಾರಿಂದ ? ಪುರುಷ ಸಮಾಜದಿಂದಲೇ, ಪಿತೃಪ್ರಧಾನ ವ್ಯವಸ್ಥೆಯಿಂದಲೇ, ನವ ಉದಾರವಾದಿ ಆರ್ಥಿಕತೆಯಿಂದಲೇ ಅಥವಾ ವಿಶಾಲ ಸಮಾಜದ ಪುರುಷಾಧಿಪತ್ಯದ ಕರಾಳ ಬಾಹುಗಳಿಂದಲೇ ? ಈ ಪ್ರಶ್ನೆಗೆ ಉತ್ತರಿಸಲು ಬಹುಶಃ ನಾವು ತಡಕಾಡುತ್ತೇವೆ. ಏಕೆಂದರೆ ಇಂದಿಗೂ ಭಾರತವನ್ನು ಪಿತೃಪ್ರಧಾನತೆಯೇ ಆಳುತ್ತಿದೆ. ಭವಾರಿ ದೇವಿಯಿಂದ ಬಿಲ್ಕಿಸ್ ಬಾನೋವರೆಗೆ, ಮಹಿಳಾ ಕುಸ್ತಿಪಟುಗಳ ಹೋರಾಟದಲ್ಲಿ ಸಹ ಇದರ ಸೂಕ್ಷ್ಮ ತಂತುಗಳನ್ನು ಸುಸ್ಪಷ್ಟವಾಗಿ ಗುರುತಿಸಬಹುದು. ನಿಜ, ಭಾರತದ ಮಹಿಳಾ ಸಂಕುಲ ಅಭ್ಯುದಯದ ಹಾದಿಯಲ್ಲಿ ಬಹುದೂರ ಸಾಗಿದೆ. ದೇಶದ ಘನತೆಯನ್ನು ಕಾಪಾಡುವಂತಹ ಸಾಧನೆಗಳನ್ನು ಮಹಿಳಾ ಸಮುದಾಯ ಮಾಡಿದೆ, ಇಂದಿಗೂ ಮಾಡುತ್ತಿದೆ. ಚಂದ್ರಯಾನದ ಯಶಸ್ಸು ಇತ್ತೀಚಿನ ಉದಾಹರಣೆ.
ಹೆಣ್ಣು ಮತ್ತು ಹೆಣ್ತನದ ಕೂಗು:
ಆದರೆ ಕೊಂಚ ಆಳಕ್ಕಿಳಿದು ಯೋಚಿಸಿದಾಗ ನಮ್ಮ ಸಮಾಜ ಉಳಿಸಲು ಹೆಣಗಾಡಬೇಕಿರುವುದು ಹೆಣ್ತನದ ಘನತೆಯನ್ನು ಎಂಬ ವಾಸ್ತವ ಮುಖಕ್ಕೆ ರಾಚುತ್ತದೆ. ನಿರಂತರವಾಗಿ ಕುಸಿಯುತ್ತಿರುವ ಲಿಂಗಾನುಪಾತದ ದತ್ತಾಂಶಗಳನ್ನು ಗಮನಿಸಿದಾಗ, ಈ ಸಮಾಜಕ್ಕೆ ಹೆಣ್ಣು ಅಪಥ್ಯವಾಗಿದ್ದಾಳೆಯೇ ಎನಿಸುವುದು ಸಹಜ. ಇದನ್ನು ಕೇವಲ ದತ್ತಾಂಶ-ಮಾಹಿತಿ-ಕಡತಗಳಲ್ಲಿ ಹುದುಗಿಸಿಟ್ಟು, ವಾರ್ಷಿಕ ವರದಿಗಳಲ್ಲಿ ಅಲ್ಲಲ್ಲಿ ಕಾಣುವ ಸುಧಾರಣೆಗಳನ್ನೇ ʼಸಾಧನೆʼ ಎಂದು ಬಿಂಬಿಸುವ ಮೂಲಕ ಸರ್ಕಾರಗಳು ತಮ್ಮ ಲಿಂಗಸೂಕ್ಷ್ಮತೆಯ ಕೊರತೆಯನ್ನು ಪ್ರದರ್ಶಿಸುತ್ತಲೇ ಬಂದಿವೆ. ಲಿಂಗಾನುಪಾತದ ಕುಸಿತವನ್ನು ಒಂದು ಸಾಮಾಜಿಕ ಸಮಸ್ಯೆ, ಇದರ ಹಿಂದೆ ಒಂದು ಸ್ಥಾಪಿತ ವ್ಯವಸ್ಥೆ ಇದೆ, ಶತಮಾನಗಳ ಬುನಾದಿ ಇರುವ ಪಿತೃಪ್ರಧಾನ ಧೋರಣೆ ಇದೆ ಎನ್ನುವ ಸಂವೇದನಾಶೀಲ ಅರಿವು ಆಳುವವರಲ್ಲಿ ಇಲ್ಲದಿರುವುದರಿಂದಲೇ, ಹೆಣ್ಣು ಜೀವ ಗರ್ಭದೊಳಗೇ ಅಂತ್ಯ ಕಾಣುತ್ತಿದೆ. ಹೆಣ್ಣು ಭ್ರೂಣ ಹತ್ಯೆ ಮತ್ತು ಅದರ ಹಿಂದಿರುವ ವಿಶಾಲ ಜಾಲ ಇದರ ಒಂದು ಸೂಚಕವಷ್ಟೇ.
ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಿಂದ ಸಕ್ಕರೆ ನಾಡು ಮಂಡ್ಯವನ್ನು ಹಾದು ಸಾಂಸ್ಕೃತಿಕ ನಗರಿ ಮೈಸೂರನ್ನೂ ತಲುಪಿರುವ ಒಂದು ಕರಾಳ ಜಾಲವು ಹಲವು ವರ್ಷಗಳಿಂದ, ಹಲವೆಡೆಗಳಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರೆ ಅದು ವ್ಯವಸ್ಥೆಯ ವೈಫಲ್ಯ ಎನ್ನದೆ ಅಡ್ಡಿಯಿಲ್ಲ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವವರ ಪ್ರೊಫೈಲ್ ಗಮನಿಸಿದರೆ ಪಿತೃಪ್ರಧಾನತೆ ಮತ್ತು ಸ್ತ್ರೀದ್ವೇಷ ನಮ್ಮ ಸಮಾಜದ ಎಲ್ಲ ಸ್ತರಗಳನ್ನೂ ಹೇಗೆ ಆವರಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೆಣ್ಣನ್ನು ದೇವತೆ ಎಂದೂ ವೈದ್ಯನನ್ನು ದೇವರು ಎಂದೂ ಭಾವಿಸುವ ಒಂದು ಸಾಂಪ್ರದಾಯಿಕ ಸಮಾಜ ಭ್ರೂಣಾವಸ್ಥೆಯಲ್ಲೇ ಹೆಣ್ಣು ಜೀವವನ್ನು ಕೊನೆಗಾಣಿಸುವ ವೈದ್ಯಲೋಕದ ದೊಡ್ಡ ಜಾಲವನ್ನು ಹೇಗೆ ಸಹಿಸಿಕೊಂಡಿರಲು ಸಾಧ್ಯ ? ಅಲೆಮನೆಯಿಂದ ನರ್ಸಿಂಗ್ ಹೋಮ್‌ವರೆಗೆ ವಿಸ್ತರಿಸುವ ಅಮಾನುಷ ಜಾಲ ಕಾನೂನು ಕಣ್ಣು ತಪ್ಪಿಸಿ ನಡೆಯುತ್ತಿತ್ತು ಎನ್ನುವುದು ಅರ್ಧಸತ್ಯ.
ಏಕೆಂದರೆ ಭಾರತದಲ್ಲಿ ನಿಷಿದ್ಧವಾದುದೆಲ್ಲವೂ ಮುಕ್ತವಾಗಿ ಸಮಾಜದ ಆವರಣದೊಳಗೇ ಚಾಲ್ತಿಯಲ್ಲಿರುತ್ತದೆ. ಮದ್ಯಪಾನದಿಂದ ಹಿಡಿದು ಅಸ್ಪೃಶ್ಯತೆಯವರೆಗೆ ಸಾಂವಿಧಾನಿಕವಾಗಿ ನಿಷಿದ್ಧವಾದರೂ ಸಮಾಜದ ಒಂದು ವರ್ಗಕ್ಕೆ ಬಳಸು ಹಾದಿಯನ್ನು ನಿರ್ಮಿಸಿಕೊಡುವ ವ್ಯವಸ್ಥಿತ ಜಾಲ ನಮ್ಮ ಆಡಳಿತ ವ್ಯವಸ್ಥೆಯೊಳಗೇ ಇದೆ. ಚುನಾವಣೆಗಳ ಸಂದರ್ಭದಲ್ಲಿ ಮತಯಾಚನೆ ಮಾಡಲು ಮನೆಮನೆ ಬಾಗಿಲಿಗೆ ತಲುಪುವ ಜನಪ್ರತಿನಿಧಿಗಳಿಗೆ ಈ ಅಕ್ರಮಗಳು ಕಾಣದಾಗುವುದಾದರೂ ಹೇಗೆ ? ಅಥವಾ ಪಾತಾಳದಲ್ಲಿ ಹುದುಗಿದ್ದರೂ ಗುರುತಿಸಿ ಹೊರತೆಗೆಯುವಂತಹ ಅತ್ಯಾಧುನಿಕ ತಂತ್ರಜ್ಞಾನದ ಸಂವಹನ ಸಾಧನಗಳನ್ನು ಹೊಂದಿರುವ ಆಡಳಿತ ವ್ಯವಸ್ಥೆಗೆ ಆಲೆಮನೆಯಲ್ಲಿದ್ದ ಸ್ಕ್ಯಾನಿಂಗ್ ಯಂತ್ರ, ಅಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ, ಅಲ್ಲಿಂದ ಬೆಂಗಳೂರಿಗೆ ಸಾಗಿಸಿ ಮಾಡಲಾಗುತ್ತಿದ್ದ ಗರ್ಭಪಾತ ಇವೆಲ್ಲವೂ ಕಾಣದಿರುವುದು ಹೇಗೆ ?
ಹೆಣ್ಣು ಭ್ರೂಣದ ದುರಂತ ಕಥನ:
ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪ್ರಕರಣದಲ್ಲಿ 900 ಭ್ರೂಣ ಹತ್ಯೆ ಮಾಡಲಾಗಿದೆ ಎಂಬ ವರದಿ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ. ಇಡೀ ಆಡಳಿತ ವ್ಯವಸ್ಥೆ ತನ್ನ ನಿದ್ರಾವಸ್ಥೆಯಿಂದ ಎದ್ದಿದೆ. ಮೈಸೂರು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿದ್ದ ಆಸ್ಪತ್ರೆಯೊಂದು ಭ್ರೂಣ ಹತ್ಯೆ-ಗರ್ಭಪಾತದ ಕೇಂದ್ರ ಬಿಂದುವಾಗಿರುವುದು ಏನನ್ನು ಸೂಚಿಸುತ್ತದೆ ? ಬೆಂಗಳೂರು, ಮಂಡ್ಯ ಮತ್ತು ಮೈಸೂರಿನಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನಡೆಯುತ್ತಿದ್ದ ಈ ದಂಧೆಯಲ್ಲಿ 700 ಗರ್ಭಿಣಿಯರನ್ನು ಲಿಂಗಪತ್ತೆಗಾಗಿ ಸ್ಕ್ಯಾನ್ ಮಾಡಲಾಗಿದೆ, ಪ್ರತಿ ತಿಂಗಳು ಸರಾಸರಿ 25 ಭ್ರೂಣಗಳನ್ನು ಹೊಸಕಿಹಾಕಲಾಗಿದೆ. ಈ ಕರಾಳ ಜಾಲದಲ್ಲಿ ಭಾಗಿಯಾಗಿರುವವರನ್ನು ಪತ್ತೆ ಮಾಡಿ, ಬಂಧಿಸಿ, ವಿಚಾರಣೆಗೊಳಪಡಿಸಿ, ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳು (PCPNDT) ಕಾಯ್ದೆ 1994ರ ಅನುಸಾರ ಶಿಕ್ಷೆಗೊಳಪಡಿಸಲಾಗುತ್ತದೆ.
ಆದರೆ ಇದು ದಟ್ಟಾರಣ್ಯದಲ್ಲಿನ ಒಂದು ಸಸಿಯ ಮೊಳಕೆ ಮಾತ್ರ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದ ಎರಡು ದಶಕಗಳಲ್ಲಿ ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಲಿಂಗಾನುಪಾತ ಸತತವಾಗಿ ಕುಸಿಯುತ್ತಲೇ ಇರುವುದು ದಾಖಲೆ ಸಮೇತ ಸಾಬೀತಾಗಿದೆ. ಕಾಲಕಾಲಕ್ಕೆ ಈ ದತ್ತಾಂಶಗಳನ್ನು ಪರಿಶೀಲಿಸುತ್ತಲೇ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ-ಕುಟುಂಬ ಕಲ್ಯಾಣ ಸಚಿವಾಲಯಗಳು. ಲಿಂಗಾನುಪಾತ ಕುಸಿತಕ್ಕೆ ಕಾರಣಗಳನ್ನು ಶೋಧಿಸಬೇಕಲ್ಲವೇ ? ಮಂಡ್ಯ ಜಿಲ್ಲೆಯಲ್ಲಿ ಈ ಸಮಸ್ಯೆಯ ಬಗ್ಗೆ ಹಲವು ವರ್ಷಗಳ ಹಿಂದೆಯೇ ಮಹಿಳಾ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿಯನ್ನೂ ಸಲ್ಲಿಸಿವೆ. PCPNDT ಕಾಯ್ದೆಯ ನಿಯಮಾನುಸಾರ ಜಿಲ್ಲಾಡಳಿತವು ಪ್ರತಿ ತಿಂಗಳ ಐದನೆಯ ತಾರೀಖಿನ ಒಳಗೆ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ.
ಈ ಪರಿಶೀಲನೆ ನಡೆಯುತ್ತಿದೆಯೇ ? ನಡೆದಿದ್ದರೆ ಕನಿಷ್ಠ 900 ಜೀವಗಳಾದರೂ ಉಳಿಯುತ್ತಿದ್ದವಲ್ಲವೇ ? ಆಸ್ಪತ್ರೆಗಳಲ್ಲಿ ಮುಖಕ್ಕೆ ರಾಚುವಂತೆ “ಲಿಂಗಪತ್ತೆ ಮಾಡುವುದು ಕಾನೂನುಬಾಹಿರ” ಎಂಬ ಬೋರ್ಡುಗಳು ಕಾಣುತ್ತವೆ. ಬಹುಶಃ ಅಧಿಕಾರಶಾಹಿಗೆ ಈ ಫಲಕಗಳೇ ಅಂತಿಮ ಸತ್ಯ ಎಂಬ ಭ್ರಮೆ ಇರಲಿಕ್ಕೂ ಸಾಕು. ಆಸ್ಪತ್ರೆಗಳ ಒಳಹೊಕ್ಕು ಪರಿಶೀಲಿಸಲು ಹಲವು ಅಡೆತಡೆಗಳಿರುತ್ತವೆ. ಆಸ್ಪತ್ರೆಯ ಮಾಲೀಕರ ಅಂತಸ್ತು, ರಾಜಕೀಯ ಪ್ರಭಾವ, ಹಣಕಾಸು-ಸಂಪತ್ತು ಹಾಗೂ ಸ್ಥಳೀಯ ಒತ್ತಡಗಳು ಅಧಿಕಾರಿಗಳನ್ನು ಬಾಗಿಲಲ್ಲೆ ತಡೆಯುತ್ತವೆ. ಹೆಚ್ಚೆಂದರೆ ಆಸ್ಪತ್ರೆ ಮುಖ್ಯಸ್ಥರ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು, ಚಹಾ ಕುಡಿದು ನಿರ್ಗಮಿಸುವ ಅವಕಾಶ ಲಭಿಸುತ್ತದೆ. ಒಳಗೆ ಇರಬಹುದಾದ ಸ್ಕ್ಯಾನಿಂಗ್ ಯಂತ್ರ ಆಡಳಿತ ವ್ಯವಸ್ಥೆಯ ಭೌತಿಕ ಸ್ಕ್ಯಾನಿಂಗ್‌ಗೆ ಒಳಗಾಗುವುದೇ ಇಲ್ಲ. ಇದು ಆಡಳಿತ ವ್ಯವಸ್ಥೆ-ಔದ್ಯಮಿಕ ಕ್ಷೇತ್ರ-ಮಾರುಕಟ್ಟೆ ಬಂಡವಾಳ ಈ ಮೂರರ ನಡುವಿನ ಅವಿನಾಭಾವ ಸಂಬಂಧವನ್ನೂ, ಅಕ್ರಮ ಸಂಪರ್ಕವನ್ನೂ ಸ್ಪಷ್ಟವಾಗಿ ಸೂಚಿಸುವುದಿಲ್ಲವೇ ?
ಕೇಂದ್ರ ಸರ್ಕಾರದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS) ಯ ಮೂರು ವರದಿಗಳನ್ನಾಧರಿಸಿ Pew Research Centre ನಡೆಸಿದ ಅಧ್ಯಯನದ ಅನುಸಾರ 2000 ದಿಂದ 2019ರ ಅವಧಿಯಲ್ಲಿ ಭಾರತದಲ್ಲಿ 90 ಲಕ್ಷ ಹೆಣ್ಣುಮಕ್ಕಳು, ಹೆಣ್ಣು ಭ್ರೂಣ ಹತ್ಯೆಯಿಂದಲೇ ಕಣ್ಮರೆಯಾಗಿದ್ದಾರೆ. ಅಂದರೆ ಸರಾಸರಿ ವರ್ಷಕ್ಕೆ ನಾಲ್ಕೂವರೆ ಲಕ್ಷ ಹೆಣ್ಣು ಭ್ರೂಣಗಳನ್ನು ಹೊಸಕಿ ಹಾಕಲಾಗಿದೆ. ಇದು ಉತ್ತರಖಾಂಡ ರಾಜ್ಯದ ಒಟ್ಟು ಜನಸಂಖ್ಯೆಯಷ್ಟೇ ಇರುವುದು ಕಾಕತಾಳೀಯವಷ್ಟೆ. ಅತಿ ಹೆಚ್ಚಿನ ಹೆಣ್ಣು ಭ್ರೂಣ ಹತ್ಯೆಯ ಪ್ರಕರಣಗಳು ಉತ್ತರ ಭಾರತದಲ್ಲಿ ವರದಿಯಾಗುತ್ತವೆ. 1994ರಲ್ಲೇ PCPNDT ಕಾಯ್ದೆ ಜಾರಿಯಾಗಿದ್ದರೂ, ಈ ಪ್ರಮಾಣದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ನಮ್ಮ ಆಡಳಿತ ವೈಫಲ್ಯಕ್ಕೆ ಕನ್ನಡಿ ಹಿಡಿದಂತಿದೆ. ಹೆಣ್ಣು ಭ್ರೂಣ ಹತ್ಯೆಗೆ ಮತಶ್ರದ್ಧೆ ಅಡ್ಡಿಯಾಗುವುದಿಲ್ಲ ಅಥವಾ ನಮ್ಮ ಸಾಂಸ್ಕೃತಿಕ ನಂಬಿಕೆಗಳೂ ಅಡ್ಡಿಯಾಗುವುದಿಲ್ಲ ಎನ್ನುವುದು ದತ್ತಾಂಶಗಳಿಂದಲೇ ತಿಳಿಯಬಹುದು. ( ದ ವೈರ್ ಸೆಪ್ಟಂಬರ್ 6 2022)
ಪಿತೃಪ್ರಧಾನತೆಯ ಬುನಾದಿ:
ಏಕೆಂದರೆ ಇಲ್ಲಿ ಕಾರ್ಯಪ್ರವೃತ್ತವಾಗುವುದು ಪಿತೃಪ್ರಧಾನತೆ ಮತ್ತು ಹೆಣ್ಣು ಜೀವವನ್ನು ಹೊರೆಯಂತೆ ಕಾಣುವ ಪುರುಷ ಪ್ರಧಾನ ಮನೋಧರ್ಮ. ಎರಡು ತಿಂಗಳ ಅವಧಿಯಲ್ಲಿ 900 ಹೆಣ್ಣು ಭ್ರೂಣ ಹತ್ಯೆಗಳನ್ನು ಸಹಿಸಿಕೊಂಡಿರುವ ನಮ್ಮ ಸಮಾಜವೂ ಇದೇ ಧೋರಣೆಯನ್ನು ಪ್ರಮಾಣೀಕರಿಸುತ್ತದೆ ಅಲ್ಲವೇ ? ಇಳೆಯ ಸ್ಪರ್ಶ ಮಾಡದೆಯೇ ತಮ್ಮ ಬದುಕುವ ಹಕ್ಕು ಕಳೆದುಕೊಳ್ಳುವ ಹೆಣ್ಣು ಜೀವಗಳ ಅಪರಾಧವಾದರೂ ಏನು ? ಕೇವಲ ಹೆಣ್ಣಾಗಿರುವುದೇ ? ಅದು ಭ್ರೂಣದ ತಪ್ಪೇ ಅಥವಾ ಭ್ರೂಣ ಸೃಷ್ಟಿಸುವ ಸ್ತ್ರೀಪುರುಷರ ಅಪರಾಧವೇ ? ಎರಡೂ ಅಲ್ಲ. ಸಾಂಪ್ರದಾಯಿಕ ಸಮಾಜದ ಒಂದು ವರ್ಗ ಹಾಗೂ ಅದನ್ನು ರೂಪಿಸಿ-ನಿಯಂತ್ರಿಸಿ-ಪೋಷಿಸುವ ಪಿತೃಪ್ರಧಾನ ವ್ಯವಸ್ಥೆ ಸಮಾಜದ ಎಲ್ಲ ಸ್ತರಗಳಲ್ಲೂ ಬಿತ್ತುತ್ತಲೇ ಬರುವ ಪುರುಷ ಪ್ರಧಾನ ಮೌಲ್ಯಗಳು ಈ ಹೆಣ್ಣು ಜೀವಗಳನ್ನು ಸಾಮಾಜಿಕ ಹೊರೆ ಎಂದೋ ಅಥವಾ ಅನಪೇಕ್ಷಿತ ಜೀವಗಳೆಂದೋ ಭಾವಿಸುತ್ತವೆ. ಈ ಮೌಲ್ಯಗಳೇ ಆಲೆಮನೆಯಿಂದ ಆಸ್ಪತ್ರೆಯವರೆಗೆ ಹೆಣ್ಣು ಭ್ರೂಣಗಳ ಶವಯಾತ್ರೆಗೆ ಬೌದ್ಧಿಕ ಭೂಮಿಕೆ ಮತ್ತು ಭೌತಿಕ ಬುನಾದಿಯನ್ನು ಒದಗಿಸುತ್ತವೆ.
ನಾವು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಸಜ್ಜಾಗಿದ್ದೇವೆ, ರಕ್ಷಣೆ ನೀಡಲು ಸಿದ್ಧವಾಗಿದ್ದೇವೆ, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ನೂರಾರು ಮಾರ್ಗಗಳಲ್ಲಿ ಸಾಗುತ್ತಿದ್ದೇವೆ. ಮತ್ತೊಂದೆಡೆ ಹೆಣ್ಣನ್ನು ಗೌರವಿಸುವ ಅನೇಕ ಸಾಂಪ್ರದಾಯಿಕ ವೇದಿಕೆಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಹೆಣ್ಣು ಮಕ್ಕಳನ್ನು ಓದಿಸಿ-ಹೆಣ್ಣು ಮಕ್ಕಳನ್ನು ರಕ್ಷಿಸಿ ಘೋಷಣೆಯ ಮೂಲಕ ದೇಶಾದ್ಯಂತ ಹೆಣ್ಣಿನ ಅಸ್ಮಿತೆಯನ್ನು ಕಾಪಾಡಲು ಸಮರೋಪಾದಿಯಾಗಿ ಕಾರ್ಯಪ್ರವೃತ್ತರಾಗಿದ್ದೇವೆ. ಆದರೆ ಮಂಡ್ಯದ ಆಲೆಮನೆಯಲ್ಲಿ ಕೊನೆಗಾಣುವ 900 ಹೆಣ್ಣು ಜೀವಗಳನ್ನು ಹೊಸಕಿ ಹಾಕುವ ಪ್ರಕ್ರಿಯೆಗೆ ವರ್ಷಗಟ್ಟಲೆ ಕುರುಡಾಗಿದ್ದೇವೆ. 20 ವರ್ಷಗಳಲ್ಲಿ ಕಣ್ಮರೆಯಾದ 90 ಲಕ್ಷ ಭ್ರೂಣಾವಸ್ಥೆಯ ಜೀವಗಳಿಗೆ ಕುರುಡಾಗಿದ್ದೇವೆ. ಈ ದತ್ತಾಂಶಗಳನ್ನು ಒಪ್ಪುವುದು ಬಿಡುವುದು ನಮ್ಮ ವಿವೇಕ ಹಾಗೂ ವಿವೇಚನೆಗೆ ಬಿಟ್ಟ ವಿಚಾರ.
ಆದರೆ ಇಲ್ಲಿ ಗಮನಿಸಬೇಕಿರುವುದು ಹೆಣ್ತನದ ಬಗ್ಗೆ ಸಮಾಜದಲ್ಲಿ ಢಾಳಾಗಿ ಕಾಣುವ ಮನೋಭಾವ. ಈ ಪುರುಷಾಹಮಿಕೆಯ ಮನೋಭಾವಕ್ಕೆ ಒಂದು ಸ್ಥಾಪಿತ ಸಾಮಾಜಿಕ ವ್ಯವಸ್ಥೆಯ ತಳಹದಿ ಇರುವುದರಿಂದಲೇ ನಮಗೆ ಕುಸ್ತಿಪಟುಗಳ ಕೂಗು, ಬಿಲ್ಕಿಸ್ ಬಾನೋ ಮೊದಲಾದವರ ಆಕ್ರಂದನ ಅಥವಾ ನಿತ್ಯ ತಮ್ಮ ಗರ್ಭದೊಳಗಿನ ಹೆಣ್ಣು ಭ್ರೂಣಗಳನ್ನು ಕಳೆದುಕೊಳ್ಳುವ ಸಾವಿರಾರು ತಾಯಂದಿರ ಚೀತ್ಕಾರ ಕೇಳಿಸುವುದಿಲ್ಲ. ಇಲ್ಲಿ ಅಸಹಾಯಕರಾಗಿ ಗರ್ಭಪಾತಕ್ಕೊಳಗಾಗುವ ಹೆಣ್ಣು ಮಕ್ಕಳ ಗೋಳೂ ನಮಗೆ ಕೇಳಿಸುವುದಿಲ್ಲ. ಹೆಣ್ಣು ಭ್ರೂಣ ಹತ್ಯೆಯ ಬ್ರಹ್ಮಾಂಡ ಹಗರಣದ ಬಗ್ಗೆ ತನಿಖೆ ನಡೆಯುತ್ತವೆ. ಬಂಧನ, ಬಿಡುಗಡೆ, ವಿಚಾರಣೆ, ಖುಲಾಸೆ ಮುಂತಾದ ಕಾನೂನು ಪ್ರಕ್ರಿಯೆಗಳು ನಡೆಯುತ್ತವೆ. ಆಲೆಮನೆಯಿಂದ ಆಸ್ಪತ್ರೆಯವರೆಗೆ ಪಾತಕಿಗಳ ಹೆಜ್ಜೆಗಳನ್ನು ಗುರುತಿಸಿ ಶಿಕ್ಷಿಸಲಾಗುತ್ತದೆ.
ಮೂಲ ರೋಗಕ್ಕೆ ಮದ್ದು ಬೇಕಿದೆ:
ಆದರೆ ಇದು ಒಂದು ಪ್ರಕರಣದ ಇತ್ಯರ್ಥವಾಗುತ್ತದೆ. ಇದನ್ನೂ ಮೀರಿದ ಒಂದು ಪಾತಕ ಜಗತ್ತು ಹೆಣ್ಣು ಭ್ರೂಣಗಳಿಗೆ ಕಂಟಕಪ್ರಾಯವಾಗಿ ಜೀವಂತಿಕೆಯಿಂದಲೇ ಇರುತ್ತದೆ. ಆಡಳಿತ ವ್ಯವಸ್ಥೆಯು PCPNDT ಕಾಯ್ದೆಯ ಅನುಷ್ಠಾನವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಬಹುಶಃ ಇಂತಹ ಪಾತಕ ಜಗತ್ತನ್ನು ಕೊನೆಗಾಣಿಬಹುದು. ಲಿಂಗಪತ್ತೆ ಮಾಡುವ ಸ್ಕ್ಯಾನಿಂಗ್ ಯಂತ್ರಗಳನ್ನು ಆಡಳಿತಾತ್ಮಕವಾಗಿ ಸ್ಕ್ಯಾನಿಂಗ್ ಮಾಡುವುದಲ್ಲದೆ, ಅಂತಹ ಆಸ್ಪತ್ರೆಗಳ, ನರ್ಸಿಂಗ್ ಹೋಮ್‌ಗಳ, ಖಾಸಗಿ ಕ್ಲಿನಿಕ್‌ಗಳ ಪರವಾನಗಿ ರದ್ದುಮಾಡಿ, ಅಂತಹ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಕ್ಷಮತೆ ಮತ್ತು ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕಾಗುತ್ತದೆ. ಕಾನೂನಾತ್ಮಕವಾಗಿ ಇವೆಲ್ಲವೂ ಸಾಧ್ಯ. ಆದರೆ ಹೆಣ್ಣು ಭ್ರೂಣವನ್ನು ಅನಪೇಕ್ಷಿತ ಎಂದು ಭಾವಿಸುವ ವಿಶಾಲ ಸಮಾಜಕ್ಕೆ ಯಾವ ಚಿಕಿತ್ಸೆ ಸಾಧ್ಯ ? ಘಟಿಸಿದ ಪ್ರಕರಣಗಳನ್ನು ಭೇದಿಸುವುದು ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತದೆ. ಆದರೆ ಮತ್ತೆ ಮತ್ತೆ ಉಲ್ಬಣಿಸುವ ರೋಗದ ಮೂಲವನ್ನು ಶೋಧಿಸಲು ನಾವು ಪಿತೃಪ್ರಧಾನ ಸಮಾಜದತ್ತಲೇ ನೋಡಬೇಕಿದೆ.
ಈ ಪಿತೃಪ್ರಧಾನತೆಯನ್ನು ಎದುರಿಸಲು ನಾಗರಿಕರು ಸಜ್ಜಾಗಬೇಕಿದೆ. ಹೆಣ್ಣಿನ ಹತ್ಯೆಗೆ, ಅಮಾಯಕ ಹೆಣ್ಣುಗಳ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಗೆ ತಣ್ಣನೆಯ ಮೌನ ವಹಿಸುವ ಒಂದು ಸಮಾಜ ಭ್ರೂಣ ಹತ್ಯೆಗೆ ಹೇಗೆ ಸ್ಪಂದಿಸಲು ಸಾಧ್ಯ ? ಏಕೆಂದರೆ ಹೊಸಕಿಹಾಕಲ್ಪಡುವ ಭ್ರೂಣ ಸದ್ದು ಮಾಡುವುದಿಲ್ಲ. ಮೂಲ ಪ್ರಶ್ನೆ ಇರುವುದು ಹೆಣ್ತನದ ಅಸ್ತಿತ್ವ ಮತ್ತು ಘನತೆಯಲ್ಲಿ. ಈ ಅಸ್ತಿತ್ವ, ಅಸ್ಮಿತೆ ಮತ್ತು ಘನತೆಯನ್ನು ಸಂರಕ್ಷಿಸಲು ಸಮಾಜವನ್ನು ಸಂವೇದನಾಶೀಲವಾಗಿ ರೂಪಿಸಬೇಕಿದೆ. ಲಿಂಗ ಸಮಾನತೆ, ಲಿಂಗ ಸೂಕ್ಷ್ಮತೆ, ಲಿಂಗ ಸಂವೇದನೆ ಹಾಗೂ ಲಿಂಗಾನುಪಾತದ ಸಮತೋಲನವನ್ನು ಕಾಪಾಡಿಕೊಳ್ಳುವ ನೈತಿಕತೆಯನ್ನು ವಿಶಾಲ ಸಮಾಜದಲ್ಲಿ, ನಿರ್ದಿಷ್ಟವಾಗಿ ಪುರುಷ ಸಮಾಜದಲ್ಲಿ, ಸ್ಥಾಪಿಸಬೇಕಿದೆ. ಇಲ್ಲಿ ಲಿಂಗಸೂಕ್ಷ್ಮತೆ ಮತ್ತು ಸಂವೇದನೆಯ ಶಿಕ್ಷಣ ಬೇಕಿರುವುದು ಹೆಣ್ಣಿಗಲ್ಲ ಪುರುಷ ಸಮಾಜಕ್ಕೆ. ಹೌದಲ್ಲವೇ ?