ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ಹೆದ್ದಾರಿ ಪ್ರಾಧಿಕಾರ ನಡೆಸಿದ ಅಮಾನವೀಯ ದಬ್ಬಾಳಿಕೆಗೆ ತಕ್ಕ ಉತ್ತರ ನೀಡುವೆವು: ಬಿ.ಕೆ.ಇಮ್ತಿಯಾಜ್
ಮಂಗಳೂರು: ಬಡಪಾಯಿ ಬೀದಿಬದಿ ವ್ಯಾಪಾರಸ್ಥರು ಜೀವನೋಪಾಯಕ್ಕಾಗಿ ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ವ್ಯಾಪಾರ ನಡೆಸುತ್ತಿದ್ದು, ಅವರ ಮೇಲೆ ಏಕಾಏಕಿ ದಾಳಿ ನಡೆಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮ ತೀರಾ ಖಂಡನೀಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಎಕರೆಗಟ್ಟಲೆ ಭೂಮಿಯನ್ನು ಕಬಳಿಸಿದ ಅತಿಕ್ರಮಣದಾರರ ವಿರುದ್ಧ ಎಳ್ಳಷ್ಟೂ ಕ್ರಮ ವಹಿಸದ ಹೆದ್ದಾರಿ ಪ್ರಾಧಿಕಾರ ಬಡಪಾಯಿಗಳ ಮೇಲೆ ದಾಳಿ ನಡೆಸಿರುವುದು ಎಷ್ಟು ಸರಿ….? ಬೀದಿಬದಿ ವ್ಯಾಪಾರದ ಮೂಲಕ ಬದುಕು ಕಟ್ಟಿಕೊಂಡ ವ್ಯಾಪಾರಸ್ಥರ ಬದುಕನ್ನೇ ನಾಶ ಮಾಡಲು ಹೊರಟ ಹೆದ್ದಾರಿ ಪ್ರಾಧಿಕಾರದ ದುರಂಹಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ನೀಡಲಿದ್ದೇವೆ ಎಂದು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ಬಿ.ಕೆ.ಇಮ್ತಿಯಾಝ್ ಎಚ್ಚರಿಕೆ ನೀಡಿದರು.
ದ.ಕ. ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ (ರಿ.)ದ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಸ್ಥರ ತಲಪಾಡಿ ವಲಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಮ್ಮ ಬಡ ಬೀದಿವ್ಯಾರಿಗಳ ವಿರುದ್ಧ ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು, ಗ್ರಾಮ ಪಂಚಾಯತ್, ಪುರಸಭಾ, ಪಟ್ಟಣ ಪಂಚಾಯತ್, ನಗರಸಭೆ, ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಅವರಿಗೆ ಗುರುತಿನ ಚೀಟಿಯನ್ನು ಕೊಡುವಂತಹ ಮತ್ತು ಅವರ ಬದುಕಿನ ಹಕ್ಕನ್ನು ರಕ್ಷಣೆ ಮಾಡುವ ಎಲ್ಲಾ ರೀತಿಯ ಸಹಕಾರವನ್ನು ಕೊಡುವಂತಹ ಕೆಲಸವನ್ನು ಸ್ಥಳೀಯ ಸಂಸ್ಥೆ ಮಾಡಬೇಕು, ಪೋಲೀಸರು ಮತ್ತು ಅಧಿಕಾರಿಗಳಿಂದ ಕಿರುಕುಳವನ್ನು ನಿಲ್ಲಿಸಬೇಕು, ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಕ್ಷಣ ಅವರ ಕಾರ್ಯಾಚರಣೆಯನ್ನು ನಿಲ್ಲಿಸಿ ಬಡ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಅಗಸ್ಟ್ 1 ರಂದು ಬೃಹತ್ ಪ್ರತಿಭಟನೆಯನ್ನು ತಲಪಾಡಿಯಲ್ಲಿ ನಡೆಸಲಿದ್ದೇವೆ ಎಂದು ಹೇಳಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ನಮ್ಮ ಬದುಕನ್ನು ನಾಶ ಮಾಡಲು ಹೊರಟಿರುವವರಿಗೆ ನಾವು ಎಚ್ಚರಿಸಲು ಇಂದು ಸೇರಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅನ್ಯಾಯ ಮಾಡುತ್ತಾರೆ, ನಾವು ಯಾರಿಗೂ ತೊಂದರೆ ಮಾಡದೆ ಪ್ರಾಮಾಣಿಕವಾಗಿ ಬದುಕನ್ನು ನಿರ್ವಹಿಸುತ್ತಿದ್ದೇವೆ. ನಾವು ಬೀದಿಬದಿಯಲ್ಲಿ ಕೆಲಸ ಮಾಡದೆ ಹೋದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತಿತ್ತು, ನಾವು ನಿರುದ್ಯೋಗ ಪಟ್ಟಿಯಿಂದ ಹೊರಬಂದು ಬೀದಿಬದಿಯಲ್ಲಿ ವ್ಯಾಪಾರ ಮಾಡಿ ಇಂದು ನಮ್ಮ ಸಂಸಾರದ ಕನಿಷ್ಟ ನಾಲ್ಕು ಜನರ ಬದುಕನ್ನು ನಡೆಸುತ್ತಿದ್ದೇವೆ. ಆದರೂ ಕಷ್ಟದಲ್ಲಿ ಕೆಲಸಮಾಡುವ ಬೀದಿಬದಿ ವ್ಯಾಪಾರಿಗಳ ಮೇಲೆ ಇವರು ಸವಾರಿ ಮಾಡುತ್ತಿದ್ದಾರೆ ಎಂದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ, ಬದುಕನ್ನು ಹತ್ತಿಕ್ಕುವವರ ವಿರುದ್ಧ ಹೋರಾಟ ಮಾಡುವುದು ನಮ್ಮ ಹಕ್ಕು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುಪ್ರೀಮ್ ಕೋರ್ಟ್ ಆದೇಶವನ್ನು ಕೈಯಲ್ಲಿ ಹಿಡಿದು ಬಡವರ ಹಕ್ಕನ್ನು ಕಸಿಯುತ್ತಿದ್ದಾರೆ. ಈಗಲಾದರೂ ನಾವು ಎಚ್ಚೆತ್ತು ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದರು.
ಸಮಾವೇಶವು ನೂತನ ತಲಪಾಡಿ ವಲಯ ಸಮಿತಿಯನ್ನು ಆಯ್ಕೆಗೊಳಿಸಿತು. ಅಧ್ಯಕ್ಷರಾಗಿ ಪ್ರಕಾಶ್ ತಲಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಕೋಟ್ಯಾನ್, ಖಜಾಂಚಿಯಾಗಿ ವಿನೋದ್ ಹಾಗೂ ಗೌರವಾಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್ ಸೇರಿದಂತೆ 9 ಮಂದಿ ಪದಾಧಿಕಾರಿಗಳು,13 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಸ್ವಾಗತಿಸಿದರು. ಸೃಜನ್ ಕಾರ್ಯಕ್ರಮ ನಿರೂಪಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: