ಕಿಲ್ಲರ್ ಅರೆಸ್ಟ್: ಅಮೆಜಾನ್ ಮ್ಯಾನೇಜರ್ ನನ್ನು ಗುಂಡಿಕ್ಕಿ ಕೊಂದ ಇಬ್ಬರು ಯುವಕರ ಬಂಧನ

ಅಮೆಜಾನ್ ನಲ್ಲಿ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ಹರ್ ಪ್ರೀತ್ ಗಿಲ್ ಅವರ ಕೊಲೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಮುಖ್ಯ ಆರೋಪಿಯನ್ನು ಮೊಹಮ್ಮದ್ ಸಮೀರ್ ಅಲಿಯಾಸ್ ಮಾಯಾ ಎಂದು ಗುರುತಿಸಲಾಗಿದ್ದು, ಇನ್ನೊಬ್ಬನನ್ನು ಬಿಲಾಲ್ ಗನಿ ಎಂದು ಗುರುತಿಸಲಾಗಿದೆ. ಇಬ್ಬರೂ ಆರೋಪಿಗಳು 18 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಮುಂಜಾನೆ 2.00 ರ ಸುಮಾರಿಗೆ ಸಿಗ್ನೇಚರ್ ಸೇತುವೆ ಬಳಿ ಬಿಲಾಲ್ ಗನಿಯನ್ನು ಬಂಧಿಸಲಾಗಿದೆ. ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಭಜನ್ಪುರದ ಸುಭಾಷ್ ವಿಹಾರ್ ನಲ್ಲಿ ಗಿಲ್ ಮತ್ತು ಅವರ ಸಂಬಂಧಿ ಗೋವಿಂದ್ ಸಿಂಗ್ (32) ಅವರ ಮೇಲೆ ಐವರು ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದಾಗ ಗಿಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಇನ್ನು ಇತರ ಮೂವರು ಸಹಚರರನ್ನು 23 ವರ್ಷದ ಸೊಹೈಲ್ ಅಲಿಯಾಸ್ ಬಾವರ್ಚಿ, 23 ವರ್ಷದ ಮೊಹಮ್ಮದ್ ಜುನೈದ್ ಅಲಿಯಾಸ್ ಬಿರಿಯಾನಿ ಮತ್ತು 19 ವರ್ಷದ ಅದ್ನಾನ್ ಅಲಿಯಾಸ್ ಡಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಆರೋಪಿಗಳು ಮಂಗಳವಾರ ರಾತ್ರಿ ಗನಿ ಅವರ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ನಂತರ ರಾತ್ರಿ 10.30 ರ ಸುಮಾರಿಗೆ ಅವರು ಸವಾರಿ ಮಾಡಲು ಹೊರಗಡೆ ಹೋಗೋಕೇ ನಿರ್ಧರಿಸಿದರು. ಇದೇ ವೇಳೆ ಮೊಹಮ್ಮದ್ ಸಮೀರ್ ಮತ್ತು ಮಾಯಾ ಪಿಸ್ತೂಲ್ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಆರೋಪಿಗಳು ಎರಡು ಬೇರೆ ಬೇರೆ ಸ್ಕೂಟರ್ ಗಳಲ್ಲಿ ಭಜನ್ಪುರ ಪ್ರದೇಶದೊಳಗಿನ ಕಿರಿದಾದ ಸ್ಥಳದಲ್ಲಿ ಚಾಲನೆ ಮಾಡುತ್ತಿದ್ದರು. ಇದೇ ವೇಳೆ ಉಂಟಾದ ಕ್ಷುಲ್ಲಕ ಕಾರಣಕ್ಕೆ ಆರೋಪಿಗಳು ಅಮೆಜಾನ್ ಮ್ಯಾನೇಜರ್ ಮತ್ತು ಅವರ ಚಿಕ್ಕಪ್ಪನೊಂದಿಗೆ ವಾಗ್ವಾದಕ್ಕೆ ಇಳಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಮೊಹಮ್ಮದ್ ಸಮೀರ್ ಹರ್ಪ್ರೀತ್ ಗಿಲ್ ಮತ್ತು ಆತನ ಸಂಬಂಧಿಯ ಮೇಲೆ ಹತ್ತಿರದಿಂದ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹರ್ಪ್ರೀತ್ ಗಿಲ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದ್ದರೆ, ಅವರ ಚಿಕ್ಕಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.