ಕಾರು – ರಿಕ್ಷಾ ಅಪಘಾತ: ಧಗಧಗನೇ ಹೊತ್ತಿ ಉರಿದ ಆಟೋ; ಮೂವರು ಸಾವು
ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಬೇಸ್ಯವಾರಿಪೇಟ ಮಂಡಲ ಸಮೀಪದ ಪುಸಲಪಾಡು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಪುಸಲಪಾಡುವಿನ ಅಮರಾವತಿ ಅನಂತಪುರಂ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಆಟೋ ರಿಕ್ಷಾಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದರಿಂದ ಆಟೋಗೆ ಬೆಂಕಿ ಹೊತ್ತಿಕೊಂಡಿದೆ. ಆಟೋದಲ್ಲಿ ಚಾಲಕ ಸೇರಿದಂತೆ ನಾಲ್ವರು ಇದ್ದರು. ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದು, ಆಟೋ ಚಾಲಕ ಹಾಗೂ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಾರ್ಕಪುರಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಬೆಸ್ತವರಿಪೇಟ ಮಂಡಲದ ಬಾರ್ಲಕುಂಟಾ ನಿವಾಸಿಗಳಾದ ವೆಂಕಟೇಶ್ವರಲು, ಚಿನ್ನಾ ವೆಂಕಟೇಶ್ವರಲು ಮತ್ತು ಶ್ರೀರಾಮುಲು ಎಂದು ಗುರುತಿಸಲಾಗಿದೆ. ಕಾರು ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂದು ಬೆಸ್ತವರಿಪೇಟ ಪೊಲೀಸ್ ಉಪನಿರೀಕ್ಷಕ ನರಸಿಂಹರಾವ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




























