ಹಾಡಹಗಲೇ ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ 3 ಲಕ್ಷ ರೂ. ದೋಚಿದ ದರೋಡೆಕೋರರು - Mahanayaka

ಹಾಡಹಗಲೇ ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿ 3 ಲಕ್ಷ ರೂ. ದೋಚಿದ ದರೋಡೆಕೋರರು

tumakuru robbery
27/03/2024


Provided by

ಕುಣಿಗಲ್:  ಹಾಡಹಗಲೇ ಮನೆಗೆ ನುಗ್ಗಿದ್ದಲ್ಲದೇ, ಮನೆಯಲ್ಲಿದ್ದ 3 ಲಕ್ಷ ರೂಪಾಯಿ ದೋಚಿ, ತಡೆಯಲು ಬಂದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿ ದರೋಡೆಕೋರರು ಪರಾರಿಯಾಗಿರುವ ಆಘಾತಕಾರಿ ಘಟನೆ  ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಉರ್ಕಿಹಳ್ಳಿ ಗ್ರಾಮದಲ್ಲಿ  ನಡೆದಿದೆ.

ಉರ್ಕೆಹಳ್ಳಿ ಗ್ರಾಮದ ಗಂಗಯ್ಯ (56)  ಎಂಬವರು ದರೋಡೆಕೋರರ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.

ಗಂಗಯ್ಯ ಮತ್ತು ಅವರ ಕುಟುಂಬ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಕ್ಕೆ ಹೊಂದಿಕೊಂಡಂತೆ ಇರುವ ಉರ್ಕಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು.

ಬೈಕ್ ನಲ್ಲಿ ಬಂದಿದ್ದ ಇಬ್ಬರು ದರೋಡೆಕೋರರು ಮನೆಯ ಬಳಿಗೆ ಬಂದು ಕುಡಿಯಲು ನೀರು ಕೊಡಿ ಎಂದು ಗಂಗಯ್ಯನವರ ಪುತ್ರಿ ಪುಷ್ಪಲತಾ ಅವರನ್ನು  ಕೇಳಿದ್ದಾರೆ. ಈ ವೇಳೆ ಪುಷ್ಪಲತಾ ಅವರು ತನ್ನ ತಾಯಿಗೆ ನೀರು ತರಲು ಹೇಳಿದರು. ಗಂಗಮ್ಮ ಮನೆಯ ಒಳಗೆ ಹೋಗುತ್ತಿದ್ದಂತೆಯೇ  ಏಕಾಏಕಿ ದರೋಡೆಕೋರರು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ.

ಇದರಿಂದ ಗಾಬರಿಗೊಂಡ ಪುಷ್ಪಲತಾ ದರೋಡೆ ತಡೆಯಲು ಯತ್ನಿಸಿದರು. ಈ ಗೊಂದಲದ ವೇಳೆ ಮನೆಯಲ್ಲಿ ಮಲಗಿದ್ದ ತಂದೆ ಗಂಗಯ್ಯ ಎಚ್ಚರಗೊಂಡು ಬಂದು ನೋಡಿದಾಗ ದರೋಡೆಕೋರರು ಹಣ ದೋಚಿಕೊಂಡು ಪರಾರಿಯಾಗಲು ಯತ್ನಿಸುತ್ತಿರುವುದು ಕಂಡು ಬಂದಿತ್ತು.

ಅವರು ತಕ್ಷಣವೇ ದರೋಡೆಕೋರರನ್ನು ಹಿಡಿಯಲು ಮುಂದಾಗಿದ್ದು, ಈ ವೇಳೆ ಗಂಗಯ್ಯನವರ ಮೇಲೆ ಒಂದು ಬಾರಿ ದರೋಡೆಕೋರರು ಗುಂಡು ಹಾರಿಸಿದರು, ಆದರೂ ಬಿಡದ ಗಂಗಯ್ಯ ಮತ್ತೆ ಅವರನ್ನು ಹಿಡಿಯಲು ಯತ್ನಿಸಿದಾಗ ಗಂಗಯ್ಯನವರ ಕಾಲಿಗೆ ಗುಂಡು ಹಾರಿಸಿ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ   ಧಾವಿಸಿದ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್ಪಿ ಅಶೋಕ್, ಡಿವೈಎಸ್‌ಪಿ ಓಂಪ್ರಕಾಶ್ ಪರಿಶೀಲನೆ ನಡೆಸಿದರು.  ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ