ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡು ಮೂವರು ಸಾವಿಗೀಡಾದ ಪ್ರಕರಣ: ಮಾಲಿಕನ ಬಂಧನ

ಬೆಳ್ತಂಗಡಿ: ಸುಡುಮದ್ದು ತಯಾರಿಸುವ ಘಟಕದಲ್ಲಿ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ವೇಣೂರು ಠಾಣೆಯಲ್ಲಿ ಶಾಂತಿ ಎಂಬವರು ನೀಡಿರುವ ದೂರಿನ ಮೇರೆಗೆ ಸುಡುಮದ್ದು ತಯಾರಿಕ ಘಟಕದ ಮಾಲಿಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಸಂಜೆ ನಡೆದ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದರು.
ಕೇರಳದ ಸ್ವಾಮಿ(55), ವರ್ಗೀಸ್(68), ಹಾಸನದ ಅರಸೀಕೆರೆ ಮೂಲದ ಚೇತನ್(25) ಮೃತಪಟ್ಟವರಾಗಿದ್ದಾರೆ. ದುರ್ಘಟನೆಯ ನಂತರ ಉಳಿದ ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಶಾಂತಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಶೀರ್ ಎಂಬಾತ ತನ್ನ ತೋಟದ ಶೆಡ್ ನಲ್ಲಿ ಕೇರಳ ಮೂಲದ ಮೂವರು ಜನರು ಹಾಗೂ ಹಾಸನ ಮೂಲದ 6 ಜನರನ್ನು ಸೇರಿಸಿಕೊಂಡು ಸ್ಫೋಟಕ ವಸ್ತುಗಳ ನುರಿತ ಕಾಮಗಾರಿಗಳನ್ನು ತಯಾರಿಸುವ ವ್ಯಕ್ತಿಗಳನ್ನು ನಿಯೋಜಿಸದೇ ಹಾಗೂ ಸ್ಫೋಟಕ ವಸ್ತು ಸಿಡಿದರೆ ಜೀವ ಹಾನಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾಗುತ್ತದೆ ಎನ್ನುವುದು ತಿಳಿದಿದ್ದರೂ, ಯಾವುದೇ ಮುಂಜಾಗೃತೆ ವಹಿಸದೇ ನಿರ್ಲಕ್ಷ್ಯದಿಂದ ಕಾಮಗಾರಿ ನಡೆದಿದ್ದು, ಈ ವೇಳೆ ಸ್ಫೋಟಕ ವಸ್ತುವಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲಸ ಮಾಡುತ್ತಿದ್ದ ಮೂವರು ಸಾವನ್ನಪ್ಪಿದ್ದು, ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.