ಗೃಹಲಕ್ಷ್ಮೀ ಯೋಜನೆಗೆ ತೆರಳಿದ 310 ಬಸ್ ಗಳು: ಪ್ರಯಾಣಿಕರು, ವಿದ್ಯಾರ್ಥಿಗಳ ಪರದಾಟ

ಚಾಮರಾಜನಗರ: ರಾಜ್ಯ ಸರ್ಕಾರದ ಬಹು ನಿರೀಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಇಂದು ಮೈಸೂರಿನಲ್ಲಿ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಚಾಮರಾಜನಗರ ವಿಭಾಗದಿಂದ ಬರೋಬ್ಬರಿ 310 ಬಸ್ ಗಳು ತೆರಳಿದ್ದು ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ.
ಚಾಮರಾಜನಗರ ವಿಭಾಗದಲ್ಲಿ ಒಟ್ಟು 510 ಬಸ್ ಗಳು ನಿತ್ಯ ಕಾರ್ಯಾಚರಣೆ ನಡೆಸುತ್ತಿದ್ದವು. ಸರ್ಕಾರದ ಯೋಜನೆ ಚಾಲನೆ ಕಾರ್ಯಕ್ರಮಕ್ಕೆ ಫಲಾನುಭವಿಗಳು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಇನ್ನಿತರರನ್ನು ಕರೆದೊಯ್ಯುವ ಸಲುವಾಗಿ 310 ಬಸ್ ಗಳನ್ನು ನಿಯೋಜನೆ ಮಾಡಿರುವ ಪರಿಣಾಮ ಕೇವಲ 200 ಬಸ್ ನಿತ್ಯದ ರೂಟ್ ಗಳಲ್ಲಿ ಸಂಚಾರ ಮಾಡುತ್ತಿವೆ.
ವಿದ್ಯಾರ್ಥಿಗಳು, ಪ್ರಯಾಣಿಕರು ಬಸ್ ಗಾಗಿ ಪರದಾಡುತ್ತಿದ್ದು ಗ್ರಾಮೀಣ ಭಾಗದಲ್ಲಿ ಬಸ್ ಗಳ ಸಂಚಾರ ವ್ಯತ್ಯಯ ಉಂಟಾಗಿದೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಬಸ್ ಗಳನ್ನು ತಡೆದು ನಿಲ್ಲಿಸಿ ನೂಕು ನುಗ್ಗಲಿನಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಿದ ಘಟನೆ ನಡೆದಿದೆ.
ಕೊಳ್ಳೇಗಾಲದಿಂದ ಮೈಸೂರು, ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆಯಿಂದ ಮೈಸೂರು ಹಾಗೂ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್ ಗಳಿಗೆ ತಾಸುಗಟ್ಟಲೇ ಕಾಯಬೇಕಿದೆ.