ಅಮಾನವೀಯ: ಮಹಾರಾಷ್ಟ್ರದಲ್ಲಿ ಕಳ್ಳತನದ ಶಂಕೆಯಲ್ಲಿ ನಾಲ್ವರು ದಲಿತರನ್ನು ತಲೆಕೆಳಗೆ ಮಾಡಿ ನೇತುಹಾಕಿ ಥಳಿತ: ಐವರ ವಿರುದ್ಧ ಕೇಸ್ ಫೈಲ್
ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಹರೇಗಾಂವ್ ಗ್ರಾಮದಲ್ಲಿ ಮೇಕೆ ಮತ್ತು ಕೆಲವು ಪಾರಿವಾಳಗಳನ್ನು ಕದ್ದಿದ್ದಾರೆ ಎಂಬ ಅನುಮಾನದ ಮೇಲೆ ನಾಲ್ವರು ದಲಿತ ಯುವಕರನ್ನು ಮರದಲ್ಲಿ ತಲೆಕೆಳಗಾಗಿ ನೇತುಹಾಕಿ ಕೋಲುಗಳಿಂದ ಥಳಿಸಿದ ಘಟನೆ ನಡೆದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸರು ದಾಳಿಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಇತರ ಐವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಆರೋಪಿಗಳನ್ನು ಯುವರಾಜ್ ಗಲಾಂಡೆ, ಮನೋಜ್ ಬೊಡಕೆ, ಪಪ್ಪು ಪಾರ್ಕೆ, ದೀಪಕ್ ಗಾಯಕ್ವಾಡ್, ದುರ್ಗೇಶ್ ವೈದ್ಯ ಮತ್ತು ರಾಜು ಬೋರಾಗ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಓರ್ವ ದಾಳಿಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಎಂದು ಹೇಳಲಾಗಿದ್ದು, ಅದು ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಸಂತ್ರಸ್ತರೆಲ್ಲರೂ 20 ರ ಹರೆಯದವರಾಗಿದ್ದು, ಇವರನ್ನು ಆರು ಮಂದಿಯ ಗುಂಪು ಅವರ ಮನೆಗಳಿಂದ ಅಪಹರಿಸಿದೆ. ಹಲ್ಲೆಯ ನಂತರ ಗಾಯಗೊಂಡ ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.




























