40% ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲೂ ಕಂಟಿನ್ಯೂ ಆಗಿದೆ: ಕೆಂಪಣ್ಣ ಗುಡುಗು

ಬೆಂಗಳೂರು: ಈ ಹಿಂದಿನ ಸರ್ಕಾರದಲ್ಲಿ ಇದ್ದಂತಹ ಶೇ.40ರಷ್ಟು ಕಮಿಷನ್ ದಂಧೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲೂ ಕಂಟಿನ್ಯೂ ಆಗಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಗುತ್ತಿಗೆದಾರರಿಂದ ಶಾಸಕರೇ ನೇರವಾಗಿ ಹಣ ಕೇಳುತ್ತಿದ್ದರು. ಇದೀಗ ಅಧಿಕಾರಿಗಳೇ ಹಣ ಕೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಅನಾವಶ್ಯಕ ಪ್ಯಾಕೇಜ್ ಟೆಂಡರ್ ವಿರುದ್ದವೂ ಗುಡುಗಿರುವ ಅವರು ಸರ್ಕಾರ ಈ ಕೂಡಲೇ ಪ್ಯಾಕೇಜ್ ಟೆಂಡರ್ ಗಳನ್ನ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ಯಾಕೇಜ್ ಟೆಂಡರ್ ಕುರಿತಂತೆ ನಾವು ಹಲವು ಭಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ ಜೊತೆಗೆ ಹತ್ತಾರು ಪತ್ರ ಬರೆದು ಒತ್ತಾಯಿಸಿದ್ದೇವೆ. ಆದರೆ, ಅವರು ನಮ್ಮ ಮಾತನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ಪೊಲೀಸ್ ವಸತಿ ಗೃಹ, ಅಭಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಮಾಡಲಾಗಿದೆ ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸವಾಗುತ್ತದೆ ಅಲ್ಲದೆ, ಹೊರ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಆರೋಪಿಸಿದರು.
ಈ ಕುರಿತಂತೆ ಬಿಬಿಎಂಪಿ ಮುಖ್ಯ ಅಭಿಯಂತರರನ್ನು ಪ್ರಶ್ನಿಸಿದರೆ ಅವರು ಮೇಲಾಧಿಕಾರಿಗಳ ಕಡೆ ಬೊಟ್ಟು ಮಾಡುತ್ತಾರೆ ಸಚಿವರನ್ನು ಕೇಳಿದರೆ ಅವರು ಶಾಸಕರ ಕಡೆ ಬೆರಳು ತೋರಿಸುತ್ತಾರೆ. ಶಾಸಕರು ತಮ್ಮ ಆಪ್ತ ಗುತ್ತಿಗೆದಾರರಿಗೆ ಟೆಂಡರ್ ಕೊಡಿಸಲು ಯತ್ನಿಸುತ್ತಿದ್ದಾರೆ ಇದರಿಂದ ಭಾರಿ ಭ್ರಷ್ಟಾಚಾರಕ್ಕೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ ಎಂದು ಕೆಂಪಣ್ಣ ಗುಡುಗಿದರು.