ಪಾಕಿಸ್ತಾನದ ಎರಡು ಮಸೀದಿಗಳಲ್ಲಿ ಸ್ಫೋಟ ಪ್ರಕರಣ: 57 ಮಂದಿ ಸಾವು
ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮದಿನದ ಸಂಭ್ರಮದಲ್ಲಿದ್ದ ಪಾಕಿಸ್ತಾನದಲ್ಲಿ ಎರಡು ಮಸೀದಿಗಳಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಹಾಗೂ ಮತ್ತೊಂದು ಸ್ಫೋಟದಲ್ಲಿ ಕನಿಷ್ಠ 57 ಮಂದಿ ಸಾವನ್ನಪ್ಪಿದ್ದಾರೆ. 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದ ಹೊಣೆಯನ್ನು ಯಾವುದೇ ಗುಂಪು ಹೊತ್ತುಕೊಂಡಿಲ್ಲ.
ಜನವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಭಯೋತ್ಪಾದಕ ದಾಳಿಗಳು ಹೆಚ್ಚುತ್ತಿರುವ ಮಧ್ಯೆ ಈ ದಾಳಿ ನಡೆದಿವೆ. ಬಲೂಚಿಸ್ತಾನದ ನೈಋತ್ಯ ಪ್ರಾಂತ್ಯದಲ್ಲಿ ಸಂಭವಿಸಿದ ಮೊದಲ ಸ್ಫೋಟದಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಅಬ್ದುಲ್ ರಶೀದ್ ತಿಳಿಸಿದ್ದಾರೆ. “ಮದೀನಾ ಮಸೀದಿ ಬಳಿ ಮೆರವಣಿಗೆಗಾಗಿ ಜನರು ಜಮಾಯಿಸುತ್ತಿದ್ದ ಪೊಲೀಸ್ ವಾಹನದ ಬಳಿ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಮುನೀರ್ ಅಹ್ಮದ್ ಹೇಳಿದ್ದಾರೆ.
ನೆರೆಯ ವಾಯುವ್ಯ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಎರಡನೇ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ. ಇದರಿಂದ ಮಸೀದಿಯ ಮೇಲ್ಛಾವಣಿಯನ್ನು ಕುಸಿದಿದ್ದು, ಸುಮಾರು 30 ರಿಂದ 40 ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಜಿಯೋ ನ್ಯೂಸ್ ತಿಳಿಸಿದೆ.
ಎರಡೂ ಪ್ರಾಂತ್ಯಗಳು ಅಫ್ಘಾನಿಸ್ತಾನದ ಗಡಿಯನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನ ಇಸ್ಲಾಮಿಕ್ ಉಗ್ರಗಾಮಿಗಳಿಂದ ದಾಳಿಗಳನ್ನು ಎದುರಿಸುತ್ತಿವೆ. ಅವರು ಪಾಕಿಸ್ತಾನದ ಸರ್ಕಾರವನ್ನು ಉರುಳಿಸುವ ಮತ್ತು ತಮ್ಮದೇ ಆದ ಕಟ್ಟುನಿಟ್ಟಾದ ಇಸ್ಲಾಮಿಕ್ ಕಾನೂನನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದಾರೆ. ಬಲೂಚಿಸ್ತಾನ ಸ್ಫೋಟವು ನಾಗರಿಕರ ಮೇಲಿನ ಅಪರೂಪದ ದಾಳಿಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ಹೆಚ್ಚಾಗಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ.



























