ಒಂದೇ ದಿನ 6,000 ಕೋಟಿ ರೂ. ಮೊತ್ತದ 1,830 ಟೆಂಡರ್‌ ಕರೆದಿರುವುದನ್ನು ಬಯಲಿಗೆಳೆದ ಎಎಪಿ - Mahanayaka
4:31 AM Tuesday 9 - September 2025

ಒಂದೇ ದಿನ 6,000 ಕೋಟಿ ರೂ. ಮೊತ್ತದ 1,830 ಟೆಂಡರ್‌ ಕರೆದಿರುವುದನ್ನು ಬಯಲಿಗೆಳೆದ ಎಎಪಿ

aam aadmi party
25/02/2023

ರಾಜ್ಯ ಸರ್ಕಾರವು ಕೇವಲ 24 ಗಂಟೆಗಳ ಅಂತರದಲ್ಲಿ ಬರೋಬ್ಬರಿ 1,830 ಟೆಂಡರ್‌ಗಳಿಗೆ ಆಹ್ವಾನ ನೀಡಿ ಕೆಲವೇ ದಿನಗಳ ಕಾಲಾವಕಾಶ ನೀಡಿದೆ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಆರೋಪಿಸಿದ್ದು, ಸಂಬಂಧಪಟ್ಟ 462 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು.


Provided by

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಫೆಬ್ರವರಿ 24ರ ಮುಂಜಾನೆ 2.30ರಿಂದ ಫೆಬ್ರವರಿ 25ರ ಮುಂಜಾನೆ 2.30ರ ನಡುವೆ ಕೇವಲ 24 ಗಂಟೆಯಲ್ಲಿ ಬರೋಬ್ಬರಿ 6000 ಕೋಟಿ ರೂಪಾಯಿ ಮೊತ್ತದ 1830 ಅಲ್ಪಾವಧಿ ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿದೆ. ಒಟ್ಟು 15ರಿಂದ 20 ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಟೆಂಡರ್‌ಗಳನ್ನು ಕರೆಯಲಾಗಿದೆ ಎಂಬ ಮಾಹಿತಿಯಿದ್ದು, ಪ್ರಸ್ತುತ ನಮಗೆ 6,000 ಕೋಟಿ ರೂಪಾಯಿ ಮೊತ್ತದ ಟೆಂಡರ್‌ಗಳ ಮಾಹಿತಿ ಮಾತ್ರ ಸಿಕ್ಕಿದೆ. ಕೇವಲ 24 ಗಂಟೆಗಳಲ್ಲಿ ದಿಢೀರ್‌ ಅಂತ ಈ ಅಲ್ಪಾವಧಿ ಟೆಂಡರ್‌ಗಳನ್ನು ಕರೆಯುವ ಅಗತ್ಯವೇನಿತ್ತು? ಕೆಲವೇ ದಿನಗಳಲ್ಲಿ ಚುನಾವಣೆ ನಡೆಯುವುದರಿಂದ ಈ ಟೆಂಡರ್‌ಗಳ ಹೊರೆಯು ಮುಂಬರುವ ಸರ್ಕಾರದ ಮೇಲಾಗಲಿದೆ” ಎಂದು ಹೇಳಿದರು.

“ಅಮಿತ್‌ ಶಾರವರು ಕರ್ನಾಟಕಕ್ಕೆ ಬಂದು, ಬಿಜೆಪಿಯು ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುತ್ತದೆ ಎಂದು ಹೇಳಿದ್ದಾರೆ. 40% ಕಮಿಷನ್‌ ಆಡಳಿತದ ಬದಲು 100% ಕಮಿಷನ್‌ ಆಡಳಿತ ಬರುತ್ತದೆ ಎಂದು ಹೇಳುವ ಬದಲು ಅವರು ಹಾಗೆ ಹೇಳಿರಬಹುದು. ರಾಜ್ಯಾದ್ಯಂತ ಸೀರೆ, ಕುಕ್ಕರ್‌, ಚಿನ್ನ, ಬೆಳ್ಳಿ, ಟಿವಿ ಮುಂತಾದವುಗಳನ್ನು ಮತದಾರರಿಗೆ ಹಂಚುತ್ತಿರುವುದಕ್ಕೆ ಬಿಜೆಪಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬುದನ್ನು ಎಎಪಿ ದಾಖಲೆಸಹಿತ ಬಹಿರಂಗಪಡಿಸುತ್ತಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಅಲ್ಪಾವಧಿ ಟೆಂಡರ್‌ಗಳನ್ನು ಕರೆಯಲಾಗುತ್ತದೆ. ಆದರೆ ಈಗ ಅಂತಹ ಯಾವುದೇ ಸನ್ನಿವೇಶ ಇಲ್ಲದಿದ್ದರೂ ಚುನಾವಣೆಗಾಗಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ಟೆಂಡರ್‌ ಕರೆಯಲಾಗಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

“ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ರಾಜ್ಯ ವಿವಿಧೆಡೆ ಶಿಕ್ಷಕರು, ಪೌರ ಕಾರ್ಮಿಕರು, ಆರೋಗ್ಯ ಸಿಬ್ಬಂದಿ ಮುಂತಾದವರು ನ್ಯಾಯಯುತವಾಗಿ ಬರಬೇಕಾದ ವೇತನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದ ಬಳಿ ಹಣವಿಲ್ಲವೆಂದು ಅವರಿಗೆಲ್ಲ ರಾಜ್ಯ ಬಿಜೆಪಿ ಸರ್ಕಾರ ಸಬೂಬು ಹೇಳುತ್ತಿದೆ. ಆದರೆ ಗುತ್ತಿಗೆ ಕಾಮಗಾರಿಗಳಿಗೆ ಟೆಂಡರ್‌ ಕರೆಯಲು ಮಾತ್ರ ಸರ್ಕಾರದ ಬಳಿ ಹಣ ಇದೆಯೇ? ಎಲ್ಲೆಲ್ಲಿ ಕಮಿಷನ್‌ ಹೊಡೆಯಲು ಅವಕಾಶವಿದೆಯೋ ಅಲ್ಲಿಗೆ ಮಾತ್ರ ಸರ್ಕಾರ ಖರ್ಚು ಮಾಡಲು ಮುಂದಾಗಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಮಾತನಾಡಿ, “ಈ ಎಲ್ಲ ಟೆಂಡರ್‌ಗಳ ಸಬ್ಮಿಷನ್‌ ದಿನಾಂಕವು ಮಾರ್ಚ್‌ 15ರ ಒಳಗೇ ಇವೆ. ಬೀದರ್‌ನಿಂದ ಚಾಮರಾಜನಗರದ ತನಕ, ರಾಜ್ಯ ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳ ಟೆಂಡರ್‌ಗಳು ಇದರಲ್ಲಿವೆ. ಒಂದೇ ಬಾರಿ ಇಷ್ಟು ಟೆಂಡರ್‌ ಕರೆದಿರುವುದು ಜಗತ್ತಿನಲ್ಲೇ ಇದೇ ಮೊದಲಿರಬಹುದು. ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಟೆಂಡರ್‌ ಗೋಲ್‌ಮಾಲ್‌ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ಹೇಳಿದರು.

“ಗ್ರಾಮೀಣ ನೀರು ಸರಬರಾಜು ಇಲಾಖೆಯ ಒಂದು ಲಕ್ಷ ಮನೆಗಳಿಗೆ ನೀರು ಪೂರೈಸುವ 2000 ಕೋಟಿ ರೂ. ಮೊತ್ತದ 456 ಟೆಂಡರ್‌ಗಳನ್ನು ಕರೆಯಲಾಗಿದೆ. ಇಂಧನ ಇಲಾಖೆ ವಸತಿ ಕಟ್ಟಡಗಳ ಕಾಂಪೌಂಡ್‌ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಕರೆದಿರುವ ಟೆಂಡರ್‌ಗಳಲ್ಲಿ 4 ಕೋಟಿ, 5 ಕೋಟಿ ರೂ. ಎಂಬ ರೌಂಡ್‌ ಫಿಗರ್‌ಗಳಿವೆ. ಕೆಪಿಟಿಸಿಎಲ್‌ನಲ್ಲಿ ಮಹೀಂದ್ರ ಬೊಲೆರೊ ವಾಹನಗಳಿಗೆ ಅಂದಾಜು ಮೊತ್ತವನ್ನೇ ನಮೂದಿಸದೇ ಮೂರು ಸಲ ಟೆಂಡರ್‌ ಕರೆದಿದ್ದಾರೆ. ಅರಣ್ಯ ಇಲಾಖೆಯ ಎಲ್ಲ ಟೆಂಡರ್‌ಗಳನ್ನು ಕೂಡ ಏಕಕಾಲಕ್ಕೆ ಕರೆಯಲಾಗಿದೆ. ಈ ಎಲ್ಲ ಟೆಂಡರ್‌ಗಳು ಕೇವಲ 7ರಿಂದ 15 ದಿನಗಳ ಅಲ್ಪಾವಧಿ ಟೆಂಡರ್‌ಗಳಾಗಿವೆ. ಅಮಿತ್‌ ಶಾಗೆ ತಾಕತ್ತಿದ್ದರೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಈ ಎಲ್ಲ ಟೆಂಡರ್‌ಗಳನ್ನು ರದ್ದುಪಡಿಸಲಿ” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಸುರೇಶ್‌ ರಾಥೋಡ್‌ ಹಾಗೂ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಭಾಗವಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ