ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ: ಮೇಘಸ್ಪೋಟಕ್ಕೆ ಏಳು ಮಂದಿ ಸಾವು - Mahanayaka
12:14 AM Thursday 18 - December 2025

ಹಿಮಾಚಲ ಪ್ರದೇಶದಲ್ಲಿ ಮಳೆಯ ಅಬ್ಬರ: ಮೇಘಸ್ಪೋಟಕ್ಕೆ ಏಳು ಮಂದಿ ಸಾವು

14/08/2023

ಹಿಮಾಚಲ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಮತ್ತೆ ಮೇಘಸ್ಪೋಟ ಸಂಭವಿಸಿ 7 ಮಂದಿ ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. ಮೇಘಸ್ಫೋಟ ಸಂಭವಿಸಿ, ಸೋಲನ್‌ ಜಿಲ್ಲೆಯ ಕಂದಘಾಟ್ ಉಪ ವಿಭಾಗದ ಜಾಡೋನ್ ಗ್ರಾಮಕ್ಕೆ ನೀರು ನುಗ್ಗಿದೆ. ಹೀಗಾಗಿ ಕೆಲವೆಡೆ ಭೂಕುಸಿತ ಸಂಭವಿಸಿದೆ. ಇನ್ನು ಪ್ರವಾಹದ ಅಬ್ಬರಕ್ಕೆ ಎರಡು ಮನೆಗಳು, ಹತ್ತಾರು ವಾಹನಗಳು ಕೊಚ್ಚಿಹೋಗಿವೆ. ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ರಸ್ತೆಗಳು, ಕಟ್ಟಡಗಳು ಕೂಡ ಕೊಚ್ಚಿಹೋಗಿವೆ.

ಈ ಘಟನೆಯಲ್ಲಿ ಎರಡು ಮನೆಗಳು ಮತ್ತು ಒಂದು ದನದ ಕೊಟ್ಟಿಗೆ ಕೊಚ್ಚಿ ಹೋಗಿದೆ. ಅವಶೇಷಗಳಡಿಯಲ್ಲಿ ಸಿಲುಕಿ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಹಾಗೂ ಐವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಸೋಲನ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಶಿಮ್ಲಾ–ಚಂಡೀಗಢ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿಮ್ಲಾ-ಚಂಡೀಗಢ ರಸ್ತೆಯಲ್ಲಿ ಸಂಚಾರವೇ ಸ್ಥಗಿತಗೊಂಡಿದ್ದು, ಜನರ ಪರದಾಡುವಂತಾಗಿದೆ. ಹಿಮಾಚಲ ಪ್ರದೇಶಕ್ಕೆ ಜೂನ್‌ 24ರಂದು ಮುಂಗಾರು ಪ್ರವೇಶವಾಗಿದ್ದು, ಇದುವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿ ಏಳು ಜನ ಮೃತಪಟ್ಟಿರುವುದಕ್ಕೆ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಅವರು ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ