97 ನೇ ವಯಸ್ಸಿನಲ್ಲೂ ವಕೀಲ ವೃತ್ತಿಯಲ್ಲಿ ಸಕ್ರಿಯ: ಹೀಗೊಂದು ಗಿನ್ನಿಸ್ ದಾಖಲೆ ನಿರ್ಮಿಸಿದ ಕೇರಳದ ಹಿರಿಯ ವಕೀಲ..! - Mahanayaka
9:18 AM Wednesday 20 - August 2025

97 ನೇ ವಯಸ್ಸಿನಲ್ಲೂ ವಕೀಲ ವೃತ್ತಿಯಲ್ಲಿ ಸಕ್ರಿಯ: ಹೀಗೊಂದು ಗಿನ್ನಿಸ್ ದಾಖಲೆ ನಿರ್ಮಿಸಿದ ಕೇರಳದ ಹಿರಿಯ ವಕೀಲ..!

09/11/2023


Provided by

ತನ್ನ 97ನೇ ವಯಸ್ಸಿನಲ್ಲಿಯೂ ವಕೀಲರಾಗಿ ಕೆಲಸ ಮಾಡುವ ಮೂಲಕ ‘ದೀರ್ಘಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಪುರುಷ’ ಎಂಬ ಗಿನ್ನಿಸ್‌ ವಿಶ್ವ ದಾಖಲೆಯನ್ನು ಕೇರಳ ರಾಜ್ಯದ ಹಿರಿಯ ವಕೀಲರೊಬ್ಬರು ತಮ್ಮದಾಗಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಉತ್ತರ ಪಾಲಕ್ಕಾಡ್ ಜಿಲ್ಲೆಯ ಪಿ. ಬಾಲಸುಬ್ರಮಣಿಯನ್ ಮೆನನ್ ಎಂಬುವವರು ಈ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ. 2023ರ ಸೆಪ್ಟೆಂಬರ್‌ 11ಕ್ಕೆ ಬಾಲಸುಬ್ರಮಣಿಯನ್ ಅವರು ವಕೀಲರಾಗಿ ವೃತ್ತಿಜೀವನ ಆರಂಭಿಸಿ ಬರೋಬ್ಬರಿ 73 ವರ್ಷ 60 ದಿನಗಳಾಗುತ್ತವೆ ಎಂದು ಗಿನ್ನಿಸ್‌ ವಿಶ್ವ ದಾಖಲೆ ತಿಳಿಸಿದೆ.

97 ವರ್ಷ ವಯಸ್ಸಾದರೂ ಬಾಲಸುಬ್ರಮಣಿಯನ್ ವೃತ್ತಿ ಜೀವನದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಪ್ರತಿದಿನ ಕಚೇರಿಗೆ ಮತ್ತು ನ್ಯಾಯಾಲಯಕ್ಕೆ ತೆರಳಿ ಕಕ್ಷಿದಾರರನ್ನು ಭೇಟಿ ಮಾಡುತ್ತಾರೆ. ಈ ಕುರಿತು ಮಾತನಾಡಿದ ಬಾಲಸುಬ್ರಮಣಿಯನ್, ಕಕ್ಷಿದಾರರು ನನ್ನ ಬಳಿ ಪ್ರಕರಣದ ಪ್ರಸ್ತಾವ ಇಟ್ಟಿದ್ದಾರೆ ಎಂದರೆ, ಅವರಿಗೆ ನನ್ನ ಮೇಲೆ ನಂಬಿಕೆ ಇದೆ ಎಂದರ್ಥ. ಹೀಗಾಗಿ ಅವರಿಗೆ ಎಷ್ಟು ನೆರವು ನೀಡಲು ಸಾಧ್ಯವೋ ಅಷ್ಟು ಮಾಡುತ್ತೇನೆ ಎನ್ನುತ್ತಾರೆ.

1950ರಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ ಬಾಲಸುಬ್ರಮಣಿಯನ್ ಅವರಿಗೆ, ನೀವು ಯಾವಾಗ ನಿವೃತ್ತಿಯಾಗುತ್ತೀರಿ ಎಂದು ಕೇಳಿದರೆ, ಎಲ್ಲಿಯವರೆಗೆ ನನ್ನ ಆರೋಗ್ಯ ಸಹಕರಿಸುವುದೋ ಅಲ್ಲಿಯವರೆಗೆ ನನ್ನ ಕಕ್ಷಿದಾರರನ್ನು ಭೇಟಿಯಾಗುತ್ತೇನೆ ಎಂದು ನಗುತ್ತಾ ಉತ್ತರ ನೀಡಿದರು.


ಇತ್ತೀಚಿನ ಸುದ್ದಿ