ಶೃಂಗೇರಿಯಲ್ಲಿ ಮಳೆ ರೌದ್ರನರ್ತನ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ, ಸಿರಿಮನೆ ಫಾಲ್ಸ್ ಮಾರ್ಗ ಬಂದ್!
ಚಿಕ್ಕಮಗಳೂರು: ಕಾಫಿನಾಡು ಹಾಗೂ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆಯ ಆರ್ಭಟ ತೀವ್ರಗೊಂಡಿದ್ದು, ಶೃಂಗೇರಿ ತಾಲೂಕಿನಲ್ಲಿ ನೆರೆ ಭೀತಿ ಎದುರಾಗಿದೆ. ಗುರುವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಧೋ ಮಳೆಯಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಲಾನಯನ ಪ್ರದೇಶಗಳ ಜನರು ಆತಂಕಕ್ಕೊಳಗಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಕಳೆದ ಗುರುವಾರ ರಾತ್ರಿಯಿಂದ ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿದೆ. ಮಳೆ ಕೊರತೆಯಿಂದ ಕಂಗಾಲಾಗಿದ್ದ ಕಾಫಿನಾಡಿನಲ್ಲಿ ಕೇವಲ ಎರಡು ದಿನಗಳ ಅವಧಿಯಲ್ಲಿ ರೌದ್ರಾವತಾರ ತಾಳಿರುವ ವರುಣ, ತಾಲೂಕನ್ನು ನೆರೆ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾನೆ. ತುಂಗಾ ನದಿಯ ನೀರ್ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಪ್ರವಾಹದೋಪಾದಿಯಲ್ಲಿ ಭೋರ್ಗರೆದು ಹರಿಯುತ್ತಿರುವ ನದಿಯ ಮನಮೋಹಕ ಹಾಗೂ ಭಯಾನಕ ದೃಶ್ಯಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿವೆ. ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ಸಿರಿಮನೆ ಫಾಲ್ಸ್ ರಸ್ತೆಗೆ ಧರೆಗುರುಳಿದ ಬೃಹತ್ ಮರ: ಸಂಚಾರ ಸ್ಥಗಿತ
ಧಾರಾಕಾರ ಮಳೆಗೆ ಶೃಂಗೇರಿ ತಾಲೂಕಿನ ಹುಲುಗಾರುಬೈಲ್ ಗ್ರಾಮದ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಕಳೆದ ಎರಡು ಗಂಟೆಗಳಿಂದ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ. ಭಾನುವಾರ ರಜಾ ದಿನವಾದ್ದರಿಂದ ಪ್ರಸಿದ್ಧ ಸಿರಿಮನೆ ಫಾಲ್ಸ್ ನೋಡಲು ದೂರದೂರುಗಳಿಂದ ಬಂದಿದ್ದ ನೂರಾರು ಪ್ರವಾಸಿಗರು ಮಾರ್ಗ ಮಧ್ಯದಲ್ಲೇ ಸಿಲುಕಿ ಪರದಾಡುವಂತಾಗಿದೆ.
ಸ್ಥಳೀಯ ನಿವಾಸಿಗಳು ತಕ್ಷಣವೇ ಮರ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಗಾಳಿ-ಮಳೆಯ ರಭಸಕ್ಕೆ ಮರ ಬಿದ್ದ ಪರಿಣಾಮ ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದ್ದು, ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD


























