ಬೆಳ್ತಂಗಡಿ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ - ಗ್ರಾಮಸ್ಥರ ತೀವ್ರ ಆಕ್ರೋಶ - Mahanayaka

ಬೆಳ್ತಂಗಡಿ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ — ಗ್ರಾಮಸ್ಥರ ತೀವ್ರ ಆಕ್ರೋಶ

balakrishna gowda.jpg
02/08/2026

ಬೆಳ್ತಂಗಡಿ: ತಾಲೂಕಿನ ರೆಖ್ಯ ಗ್ರಾಮದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ನೆಲ್ಯಡ್ಕ–ಇದ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಎಂಬುವವರೇ ಈ ದಾಳಿಗೆ ಬಲಿಯಾದ ವ್ಯಕ್ತಿ.

ಶನಿವಾರ ಸಂಜೆ ಮುಚ್ಚಿರಡ್ಕ ಭಾಗದಲ್ಲಿ ಕೆಲಸ ಮುಗಿಸಿಕೊಂಡು ಬಾಲಕೃಷ್ಣ ಗೌಡ ಅವರು ಮನೆಗೆ ಹೊರಟಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ತಕ್ಷಣವೇ ಹುಡುಕಾಟ ಆರಂಭಿಸಿದರು. ಮಾರ್ಗಮಧ್ಯೆ ಅವರು ಧರಿಸಿದ್ದ ಮಳೆರಕ್ಷಣೆಯ ಪ್ಲಾಸ್ಟಿಕ್ ಕೋಟ್ ಬಿದ್ದಿರುವುದು ಕಂಡುಬಂದಿದ್ದು, ಅದೇ ಜಾಗದಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳೂ ಸ್ಪಷ್ಟವಾಗಿ ಗೋಚರಿಸಿದ್ದವು. ಇದರಿಂದ ಅನುಮಾನಗೊಂಡ ಸ್ಥಳೀಯರು ಸುತ್ತಮುತ್ತ ಗಂಭೀರವಾಗಿ ಹುಡುಕಾಡಿದಾಗ, ರಸ್ತೆ ಬದಿಯಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಸಿಕ್ಕ ಸ್ಥಳದ ಸಮೀಪದಲ್ಲಿದ್ದ ಆನೆಯ ಹೆಜ್ಜೆ ಗುರುತುಗಳನ್ನು ಆಧರಿಸಿ ಕಾಡಾನೆ ದಾಳಿಯಿಂದಲೇ ಈ ಸಾವು ಸಂಭವಿಸಿದೆ ಎಂದು ಧೃಡಪಡಿಸಲಾಗಿದೆ.

ರೆಖ್ಯ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಪ್ರತಿದಿನವೂ ಭಯದ ನೆರಳಿನಲ್ಲೇ ಬದುಕುವಂತಾಗಿದೆ. ಆನೆಗಳ ಈ ನಿರಂತರ ದಾಳಿಯಿಂದಾಗಿ ಇದೀಗ ಅಮಾಯಕ ಜೀವವೊಂದು ಬಲಿಯಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ