ಮುಸ್ಲಿಮರ ಮೇಲೆ ಗೂಬೆ ಕೂರಿಸಿ ಬೆಡ್ ಬ್ಲಾಕಿಂಗ್ ಹಗರಣ, ಕೊರೊನಾ ವೈಫಲ್ಯ ಮುಚ್ಚಿ ಹಾಕಲು ಬಿಜೆಪಿ ಯತ್ನ? - Mahanayaka
10:43 PM Wednesday 20 - August 2025

ಮುಸ್ಲಿಮರ ಮೇಲೆ ಗೂಬೆ ಕೂರಿಸಿ ಬೆಡ್ ಬ್ಲಾಕಿಂಗ್ ಹಗರಣ, ಕೊರೊನಾ ವೈಫಲ್ಯ ಮುಚ್ಚಿ ಹಾಕಲು ಬಿಜೆಪಿ ಯತ್ನ?

eshwarappa tejaswi surya
05/05/2021


Provided by

ಬೆಂಗಳೂರು: ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರ. ರಾಜ್ಯದಲ್ಲಿಯೂ ಇರೋದು ಬಿಜೆಪಿ ಸರ್ಕಾರ. ಬಿಬಿಎಂಪಿಯಲ್ಲಿರುವುದು ಕೂಡ ಬಿಜೆಪಿ ಆಡಳಿತ. ಆದರೆ, ಬೆಡ್ ದಂಧೆ ನಡೆಸಿದ್ದು ಮುಸ್ಲಿಮ್ ಸಂಘಟನೆಗಳಂತೆ. ಇದು ಬೆಡ್ ದಂಧೆಯನ್ನು ಮುಚ್ಚಿ ಹಾಕಲು ನಡೆಸುತ್ತಿರುವ ವ್ಯವಸ್ಥಿತ ಪ್ಲಾನ್  ಅಲ್ಲದೇ ಮತ್ತಿನ್ನೇನು? ಎನ್ನು ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.

ನಿನ್ನೆ ಬೆಡ್ ಬ್ಲಾಕಿಂಗ್  ದಂಧೆಗೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಬಿಗ್ ಡ್ರಾಮಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ತೇಜಸ್ವಿ ಸೂರ್ಯ, ಮುಸ್ಲಿಮ್ ಸಮುದಾಯದ ಯುವಕರ ಹೆಸರುಗಳನ್ನು ಹೇಳಿದರು. ಆದರೆ, ಈ ದಂಧೆಗೆ ಸಂಬಂಧಿಸಿದಂತೆ ಬಂಧಿತರಾಗಿರುವವರು 42 ವರ್ಷ ವಯಸ್ಸಿನ ನೇತ್ರಾವತಿ ಹಾಗೂ 32 ವರ್ಷ ವಯಸ್ಸಿನ ರೋಹಿತ್ ಎಂಬ ಆರೋಪಿಗಳಾಗಿದ್ದಾರೆ.

ನಿನ್ನೆ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಕೋಮುವಾದವನ್ನು ಹರಡಲು ಯತ್ನಿಸಿದ ಬೆನ್ನಲ್ಲೇ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದು,  ಈ ಪ್ರಕರಣದಲ್ಲಿ ಮುಸ್ಲಿಮ್ ಸಂಘಟನೆಗಳ ಕೈವಾಡ ಇದೆ. ಪ್ರಕರಣದಲ್ಲಿ ಮುಸ್ಲಿಮ್ ಸಮುದಾಯದವರೇ ಹೆಚ್ಚಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಬಾರಿಯೂ ಕೊರೊನಾ ಸಂದರ್ಭದಲ್ಲಿ ತಬ್ಲಿಘ್ ಗಳನ್ನು ಮುಂದಿಟ್ಟುಕೊಂಡು ಸರ್ಕಾರ ಸೇಫ್ ಆಗಿತ್ತು. ಈ ಬಾರಿ, ಆಕ್ಸಿಜನ್ ದುರಂತ ಸಹಿತ ಎಲ್ಲ ವೈಫಲ್ಯಗಳನ್ನು ಮರೆ ಮಾಚಲು ಮುಸ್ಲಿಮರನ್ನು ತೋರಿಸಿ, ಇತರ ಧರ್ಮೀಯರನ್ನು ವಂಚನೆ ಮಾಡುವ ಮೋಸದಾಟಕ್ಕೆ ಬಿಜೆಪಿ ಇಳಿದಿದ್ದು, ಇದರ ಟ್ರೈಲರ್ ತೇಜಸ್ವಿ ಸೂರ್ಯ ಹಾಗೂ ಬಳಗ ನಡೆಸಿಕೊಟ್ಟ ಹೈಡ್ರಾಮವಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಬಿಜೆಪಿ ಸಚಿವರ ಹಾಗೂ ಬಿಬಿಎಂಪಿಯ ಬಿಜೆಪಿ ನಾಯಕರ ಸಹಕಾರವಿಲ್ಲದೇ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ನಡೆಯಲು ಸಾಧ್ಯವೇ ಇಲ್ಲ. ಸರ್ಕಾರ ಈ ವಿಚಾರದಲ್ಲಿ ಕೋಮುವಾದವನ್ನು ಹರಡುವ ಮೂಲಕ ಭಾರೀ ದೊಡ್ಡ ಹಗರಣವನ್ನು ಮುಚ್ಚಿಹಾಕಲು ವ್ಯವಸ್ಥಿಯವಾಗಿ ಪ್ಲಾನ್ ಮಾಡಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಇದಕ್ಕೆ ಪೂರಕ ಎನ್ನುವಂತೆ ಈಶ್ವರಪ್ಪ ಈ ಹೇಳಿಕೆ ನೀಡಿರುವ ಸಾಧ್ಯತೆಗಳು ಕಂಡು ಬಂದಿದೆ.

ಬೆಡ್ ಬ್ಲಾಕಿಂಗ್ ದಂಧೆ ನಡೆಸಿದ್ದರಿಂದ ಮುಸ್ಲಿಮರು, ಹಿಂದೂಗಳು, ಕ್ರೈಸ್ತರು, ಬೌದ್ಧರು ರಾಜ್ಯದ ಎಲ್ಲ ಧರ್ಮೀಯರ ಮನೆಯಲ್ಲಿಯೂ ಸಾವು ಸಂಭವಿಸಿದೆ. ಆದರೆ ಇದನ್ನು ಒಂದು ಧರ್ಮದವರ ತಲೆಗೆ ಕಟ್ಟಿ ಸರ್ಕಾರ ರಕ್ಷಣೆ ಪಡೆಯಲು ಮುಂದಾಗುತ್ತಿದೆ ಎನ್ನುವ ಅನುಮಾನಗಳು ಬಲಗೊಂಡಿದೆ. ಇನ್ನು ಟಿವಿ ಮಾಧ್ಯಮವೊಂದರ ಅಂತರ್ಜಾಲ ಮಾಧ್ಯಮದಲ್ಲಿ ಕಾಂಗ್ರೆಸ್ ನ ಮುಸ್ಲಿಮ್ ನಾಯಕರೊಬ್ಬರ ಜೊತೆಗೆ ಆರೋಪಿಗಳಿದ್ದಾರೆ ಎನ್ನುವ ಫೋಟೋ ಸಹಿತ ವರದಿ ಮಾಡಿದೆ ಆದರೆ, ಈ ಚಿತ್ರಗಳು ಎಡಿಟ್ ಮಾಡಲಾಗಿರುವ ಚಿತ್ರಗಳಂತೆ ಕಂಡು ಬಂದಿದೆ.

ರಾಜ್ಯ ಸರ್ಕಾರವು ಕೊರೊನಾ ವೈಫಲ್ಯವನ್ನು ಮುಚ್ಚಿ ಹಾಕಲು ಮುಸ್ಲಿಮರ ಹೆಸರು ಬಳಸುತ್ತಿದೆ. ಇದಕ್ಕೆ ಕೆಲವು ಮಾಧ್ಯಮಗಳು ಕೂಡ ಸಾಥ್ ನೀಡುತ್ತಿದೆ ಎನ್ನುವ ಅನುಮಾನಗಳು ಸೃಷ್ಟಿಯಾಗಿವೆ. ಬೆಡ್ ಬ್ಲಾಕಿಂಗ್ ಪ್ರಕರಣದ ತನಿಖೆಯನ್ನು ಸರ್ಕಾರವು ಉನ್ನತ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಈ ಪ್ರಕರಣದಲ್ಲಿ ಯಾರು ಕೂಡ ಸುರಕ್ಷಿತರಾಗಬಾರದು. ಪ್ರಕರಣದಲ್ಲಿ ಯಾರೇ ಶಾಮೀಲಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕಿದೆ. ರಾಜ್ಯದ ಜನರು ಕೋಮುಭಾವನೆ ಬಿಟ್ಟು, ಈ ಪ್ರಕರಣದಲ್ಲಿ ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಬೇಕಿದೆ. ಇಷ್ಟೊಂದು ದೊಡ್ಡ ಹಗರಣ ನಡೆಯುತ್ತಿದ್ದರೂ ಸರ್ಕಾರ ಸುಮ್ಮನೆ ಯಾಕೆ ಇತ್ತು? ಚಾಮರಾಜನಗರದಲ್ಲಿ ನಡೆದ ದೊಡ್ಡ ದುರಂತಗಳನ್ನು ಮುಚ್ಚಿ ಹಾಕಲು ಮುಸ್ಲಿಮರ ಮೇಲೆ ಗೂಬೆ ಕೂರಿಸಿ, ರಾಜ್ಯದ ಜನರ ದಿಕ್ಕು ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎನ್ನುವ ಅನುಮಾನ ಬಲಗೊಂಡಿದೆ.

ಇತ್ತೀಚಿನ ಸುದ್ದಿ