ಲಾಕ್ ಡೌನ್ ವೇಳೆಯಲ್ಲಿ ಆರು ದಶಕಗಳ ಇತಿಹಾಸ ಹೊಂದಿದ್ದ ಮಾರುಕಟ್ಟೆ ನೆಲಸಮ - Mahanayaka
12:23 PM Wednesday 20 - August 2025

ಲಾಕ್ ಡೌನ್ ವೇಳೆಯಲ್ಲಿ ಆರು ದಶಕಗಳ ಇತಿಹಾಸ ಹೊಂದಿದ್ದ ಮಾರುಕಟ್ಟೆ ನೆಲಸಮ

mangalore central market
28/05/2021


Provided by

ಮಂಗಳೂರು: ನಗರದಲ್ಲಿ ಆರು ದಶಕಗಳ ಇತಿಹಾಸ ಹೊಂದಿದ್ದ ಕೇಂದ್ರ ಮಾರುಕಟ್ಟೆಯ ಒಳಭಾಗವನ್ನು ಬುಧವಾರ ಸಂಪೂರ್ಣ ನೆಲಸಮಯ ಮಾಡಲಾಗಿದ್ದು, ಹೊರಭಾಗದ ಕಟ್ಟಡಗಳನ್ನು ಗುರುವಾರ ಜೆಸಿಬಿಯಿಂದ ತೆರವು ಮಾಡಲಾಯಿತು.

ಕೇಂದ್ರ ಮಾರುಕಟ್ಟೆಯ ಹೊರ ಆವರಣದ ಕಟ್ಟಡದ ಕೆಲವೊಂದು ಮಳಿಗೆಗಳ ಒಳಗಿರುವ ಸಾಮಗ್ರಿಗಳು ಇನ್ನೂ ಸ್ಥಳಾಂತರಗೊಂಡಿಲ್ಲ. ಮಳಿಗೆಗಳ ಒಳಗಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಶಿಥಿಲಾವಸ್ಥೆಯಲ್ಲಿದ್ದ ಕೇಂದ್ರ ಮಾರುಕಟ್ಟೆ ಕಟ್ಟಡವನ್ನು ಕೆಡವಿ, ಹೊಸ ರೂಪ ನೀಡಲು 2016ರ ಜೂನ್ 29ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು. ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸ ಮಾರುಕಟ್ಟೆ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. 2018ರ ಸೆಪ್ಟೆಂಬರ್‌ 22ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ನಡೆದ ಹೈಪವರ್ ಸ್ಟಿಯರಿಂಗ್ ಕಮಿಟಿ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿತ್ತು.

2020ರ ಮಾರ್ಚ್ 23ರಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾರುಕಟ್ಟೆ ಕಟ್ಟಡದ ಪರಿಶೀಲನೆ ನಡೆಸಿ, ಅದು ವಾಸ ಯೋಗ್ಯವಲ್ಲ ಎಂದು ದೃಢೀಕರಿಸುವ ಮೂಲಕ ಕಟ್ಟಡ ಕೆಡವಲು ಶಿಫಾರಸು ಮಾಡಿದ್ದರು. ಇದೇ ವೇಳೆ ಕೋವಿಡ್-19 ಲಾಕ್‌ ಡೌನ್ ಹಿನ್ನೆಲೆಯಲ್ಲಿ ಕಳೆದ ವರ್ಷ ಏಪ್ರಿಲ್ 2 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗೆ ಮತ್ತೆ ನಿರ್ಣಯಿಸಲಾಯಿತು.

2020ರ ಏಪ್ರಿಲ್ 7 ರಿಂದ ಸಂಪೂರ್ಣ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಮಾರುಕಟ್ಟೆ ಮುಚ್ಚಲು ಆದೇಶ ಹೊರಡಿಸಲಾಗಿತ್ತು. ಈ ಸಂದರ್ಭ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿಗೆ ಸ್ಥಳಾಂತರಿಸಲಾಯಿತು.

ಈ ಮಧ್ಯೆ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ಒಂದು ವರ್ಷದಿಂದ ಮಾರುಕಟ್ಟೆ ಬಹುತೇಕವಾಗಿ ಬಂದ್ ಆಗಿತ್ತು. ಬುಧವಾರದಿಂದ ಪಾಲಿಕೆ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಕಟ್ಟಡ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಇತ್ತೀಚಿನ ಸುದ್ದಿ