ಆಮಿಷ ನಂಬಿ ಹೋದ ಬಿಎಸ್ ಪಿ ಅಭ್ಯರ್ಥಿಗೆ ಮೂರು ನಾಮ ಹಾಕಿದ ಬಿಜೆಪಿ | ಚುನಾವಣೆಗೆ ಕಪ್ಪು ಹಣ ಬಳಕೆ ಆರೋಪ - Mahanayaka

ಆಮಿಷ ನಂಬಿ ಹೋದ ಬಿಎಸ್ ಪಿ ಅಭ್ಯರ್ಥಿಗೆ ಮೂರು ನಾಮ ಹಾಕಿದ ಬಿಜೆಪಿ | ಚುನಾವಣೆಗೆ ಕಪ್ಪು ಹಣ ಬಳಕೆ ಆರೋಪ

k sundar k surendran
06/06/2021


Provided by

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಅಭ್ಯರ್ಥಿ ಕೆ.ಸುಂದರ್ ಅವರಿಗೆ ಕೇರಳ ಬಿಜೆಪಿ ಘಟಕವು ನಾಮಪತ್ರ ವಾಪಸ್ ಪಡೆಯುವಂತೆ 15 ಲಕ್ಷ ರೂಪಾಯಿ ಆಮಿಷವೊಡ್ಡಿರುವ ಆರೋಪ ಕೇಳಿ ಬಂದಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿ ಕೆ.ಸುಂದರ ಅವರ ಹೆಸರು ಹಾಗೂ  ಇದೇ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ.ಸುರೇಂದ್ರನ್ ಅವರ ಹೆಸರು ಒಂದೇ ರೀತಿಯಲ್ಲಿರುವುದರಿಂದ ಬಿಜೆಪಿಗೆ ಮತಗಳು ಕಡಿಮೆಯಾಗುತ್ತದೆ ಎನ್ನುವ ಕಾರಣಕ್ಕೆ ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳಲು ಬಿಜೆಪಿ ಆಮಿಷ ನೀಡಿತ್ತು ಎಂದು ಸುಂದರ್ ಹೇಳಿದ್ದಾರೆ.

ನಾಮಪತ್ರ ವಾಪಸ್ ಪಡೆಯಲು ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಸುಂದರ್ ಬಿಜೆಪಿಗೆ 15 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದರು. ಆದರೆ,  ಬಿಜೆಪಿಯು 2.5 ಲಕ್ಷ ರೂಪಾಯಿ ಹಾಗೂ 15 ಸಾವಿರ ರೂಪಾಯಿ ಬೆಲೆಯ ಮೊಬೈಲ್ ನ್ನು ನೀಡಿತ್ತು. ಚುನಾವಣೆಯಲ್ಲಿ ಗೆದ್ದರೆ, ಕರ್ನಾಟಕದಲ್ಲಿ ಒಂದು ವೈನ್ ಶಾಪ್ ಗೆ ಅವಕಾಶ ನೀಡಬೇಕು ಎಂದೂ ಸುಂದರ್ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಈಡೇರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು ಎಂದು ಸುಂದರ್ ಹೇಳಿದ್ದಾರೆ.

ಬಿಜೆಪಿಯ ಆಮಿಷವನ್ನು ಸ್ವೀಕರಿಸಿದ್ದ ಸುಂದರ್, ಮಾರ್ಚ್ 22ರಂದು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದರು.  ಇವರು ನಾಮಪತ್ರವನ್ನು ವಾಪಸ್ ಪಡೆದುಕೊಂಡರೂ ಕೂಡ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಚುನಾವಣೆಯಲ್ಲಿ ಸೋಲನುಭವಿಸಿದ್ದರು.

ಇವರಿಬ್ಬರ ಹೆಸರುಗಳ ನಡುವಿನ ಸಾಮ್ಯತೆಯಿಂದಾಗಿ 2016 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಐಯುಎಂಎಲ್‌ ನ ಪಿ.ಬಿ.ಅಬ್ದುಲ್‌ ರಜಾಕ್‌ ವಿರುದ್ಧ ಕೇವಲ 89 ಮತಗಳ ಅಂತರದಲ್ಲಿ ಸೋತಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಂದರ 467 ಮತ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸುಂದರ್ ಗೆ ಬಿಜೆಪಿ ಗಾಳ ಹಾಕಿತ್ತು. ಅವರು ನಿರೀಕ್ಷಿಸಿದಂತೆಯೇ ಎಲ್ಲ ನಡೆದಿತ್ತು. ಬಿಎಸ್ ಪಿಯಿಂದ ಸ್ಪರ್ಧಿಸಿದ್ದ ಸುಂದರ್, ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಈ ಎಲ್ಲ ಘಟನೆಗಳ ಬಳಿಕ ಸುಂದರ್ ನ ಬಳಿಗೆ ಬಿಜೆಪಿ ನಾಯಕರು ಬಂದಿಲ್ಲ. ಕೆ.ಸುರೇಂದ್ರನ್ ಅವರು ಚುನಾವಣೆಯಲ್ಲಿ ಸೋತ ಬಳಿಕ ಸುಂದರ್ ನ ಬೇಡಿಕೆಗಳು ಈಡೇರಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಂದರ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಸದ್ಯ ಕೇರಳದಲ್ಲಿ ಇದೊಂದು ದೊಡ್ಡ ಚರ್ಚೆಯ ವಿಚಾರವಾಗಿದೆ. ಬಿಜೆಪಿಯು ಚುನಾವಣೆಗೆ ಕಪ್ಪು ಹಣವನ್ನು ಬಳಸಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಪ್ರಕರಣ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆಯೇ, ಈ ಗಂಭೀರ ಆರೋಪವನ್ನು ಮಾಡಿರುವ ಸುಂದರ್, ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ. ಅಥವಾ ನಾಪತ್ತೆಯಾಗಿದ್ದಾರೆ ಎನ್ನುವ ವರದಿಗಳು ಕೇರಳ ಮಾಧ್ಯಮಗಳಲ್ಲಿ ಬಂದಿವೆ.

ಇತ್ತೀಚಿನ ಸುದ್ದಿ