ಕ್ಷೌರ ಮಾಡಿಸಿಕೊಳ್ಳಲು ಹೋದ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ | ಪ್ರಾಣಿಗಳಂತೆ ಎರಗಿದ ಅನಾಗರಿಕರು - Mahanayaka
10:29 AM Wednesday 20 - August 2025

ಕ್ಷೌರ ಮಾಡಿಸಿಕೊಳ್ಳಲು ಹೋದ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ | ಪ್ರಾಣಿಗಳಂತೆ ಎರಗಿದ ಅನಾಗರಿಕರು

news
09/06/2021


Provided by

ಕೊಪ್ಪಳ: ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದ ಇಬ್ಬರು ದಲಿತ ಯುವಕರಿಗೆ ಜಾತಿಯ ಕಾರಣಕ್ಕಾಗಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ 14 ಕಿಡಿಗೇಡಿಗಳ ಮೇಲೆ ದೂರು ದಾಖಲಾಗಿದೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಾದಿಗ ಸಮಾಜದವರಿಗೆ ಜಾತಿಯ ಕಾರಣಕ್ಕಾಗಿ ಕ್ಷೌರ ಮಾಡಲು ಕ್ಷೌರಿಕ ನಿರಾಕರಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆಯಷ್ಟೇ ಗಲಾಟೆ ನಡೆದಿತ್ತು. ಇದಾದ ಬಳಿಕ ಜೂನ್ 6ರಂದು  ಗ್ರಾಮದ ಸಣ್ಣ ಹನುಮಂತ ಹಾಗೂ ಬಸವರಾಜ ಎಂಬವರು ಕ್ಷೌರ ಮಾಡಿಸಿಕೊಳ್ಳಲು ಹೋದ ವೇಳೆ, ಜಾತಿ ನಿಂದನೆ ಮಾಡಿ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಹಲ್ಲೆಯ ಪರಿಣಾಮ  ಸಂತ್ರಸ್ತ ಯುವಕರು ಗಂಭೀರ ಗಾಯಗಳೊಂದಿಗೆ ಕೊಪ್ಪಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ಷೌರ ಮಾಡುವವನಿಗೆ ಅಸ್ಪೃಶ್ಯತೆ ಆಚರಣೆಯ ಪರವಾಗಿರುವ ಕೆಲವರು ಕ್ಷೌರ ಮಾಡದಂತೆ ಬೆಂಬಲವಾಗಿ ನಿಂತಿದ್ದು, ಇಲ್ಲಿನ ಮಾದಿಗ ಸಮುದಾಯದ ಮೇಲೆ ಅನಾಗರಿಕತೆಯ ವರ್ತನೆಯನ್ನು ತೋರುತ್ತಿದ್ದಾರೆ. ಇಬ್ಬರು ಮಾದಿಗ ಯುವಕರ ಮೇಲೆ ಪ್ರಾಣಿಗಳಂತೆ ಎರಗಿರುವ ಈ ಅನಾಗರಿಕರು ಕೊಲೆಗೆ ಯತ್ನಿಸಿದ್ದು, ಇನ್ನು ಯಾರು ಕೂಡ ಕ್ಷೌರ ಮಾಡಿಸಲು ಹೋಗದಂತೆ ಭಯಾತಂಕ ಸೃಷ್ಟಿಸಿದ್ದಾರೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.

ಈ ಘಟನೆಯ ಸಂಬಂಧ ನ್ಯಾಯಪಡೆಯಲು ಪೊಲೀಸ್ ಠಾಣೆಗೆ ದೂರು ನೀಡಲು ಹೊಸಹಳ್ಳಿಯ ಸಮುದಾಯದ ಮುಖಂಡರು ಹೋದ ಸಂದರ್ಭದಲ್ಲಿ ದೂರು ದಾಖಲಿಸಲು  ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ