ಅಂಬೇಡ್ಕರ್ ಪೋಸ್ಟರ್ ಹಾಕಿದ್ದಕ್ಕೆ ದಲಿತ ಯುವಕನ ಕೊಲೆ | ಈ  ಅನಾಗರಿಕರಿಗೆ ಇನ್ನೆಷ್ಟು ಬಲಿ ಬೇಕು? - Mahanayaka
11:06 PM Wednesday 20 - August 2025

ಅಂಬೇಡ್ಕರ್ ಪೋಸ್ಟರ್ ಹಾಕಿದ್ದಕ್ಕೆ ದಲಿತ ಯುವಕನ ಕೊಲೆ | ಈ  ಅನಾಗರಿಕರಿಗೆ ಇನ್ನೆಷ್ಟು ಬಲಿ ಬೇಕು?

jaipur news
10/06/2021


Provided by

ಜೈಪುರ: ಈ ಡಿಜಿಟಲ್ ಯುಗದಲ್ಲಿಯೂ ಜಾತಿ-ಬೇಧ ಭಾವಗಳನ್ನಾಚರಿಸುತ್ತಿರುವ ಅನಾಗರಿಕರಿದ್ದಾರೆ ಎನ್ನುವುದೇ ದುರಾದೃಷ್ಟಕರ ಸಂಗತಿಯಾಗಿದೆ. ಅಂಬೇಡ್ಕರ್ ಜಯಂತಿಯ ಸಂದರ್ಭದಲ್ಲಿ ದಲಿತ ಯುವಕನೋರ್ವ ತನ್ನ ಮನೆಯ ಹೊರಗೆ ಅಂಬೇಡ್ಕರ್ ಅವರ ಪೋಸ್ಟರ್ ಅಂಟಿಸಿದ್ದಕ್ಕೆ ತಂಡವೊಂದು  ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಆದರೆ, ಆ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ರಾಜಸ್ಥಾನದ ಹನುಮಾನ್ ಘರ್ ಜಿಲ್ಲೆಯ ಕಿಕ್ರಲಿಯಾ ಗ್ರಾಮದಲ್ಲಿ ಜೂನ್ 5ರಂದು ಅನಾಗರಿಕರ ತಂಡವೊಂದು ಭೀಮ್ ಆರ್ಮಿ ಸದಸ್ಯ, 21 ವರ್ಷ ವಯಸ್ಸಿನ ವಿನೋದ್ ಬಮ್ನಿಯಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಅಂಬೇಡ್ಕರ್ ಜಯಂತಿಯಂದು ತನ್ನ ಮನೆಯ ಹೊರಗೆ ಅಂಬೇಡ್ಕರ್ ಅವರ ಪೋಸ್ಟರ್ ನ್ನು ವಿನೋದ್ ಅಂಟಿಸಿದ್ದರು. ಆದರೆ, ಇದನ್ನು ಅನಿಲ್ ಸಿಹಾಗ್ ಹಾಗೂ ರಾಕೇಶ್ ಸಿಹಾಗ್ ಎಂಬ ಜಾತಿ ಪೀಡೆ ಅನಾಗರಿಕರು ಹರಿದು ಹಾಕಿದ್ದರು.

ಭೀಮ್ ಆರ್ಮಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ವಿನೋದ್, ಈ ಘಟನೆಯ ವಿರುದ್ಧ ಕಾನೂನಿನ ಮೊರೆ ಹೋಗಿದ್ದು, ಇವರಿಬ್ಬರ ಮೇಲೆ ದೂರು ದಾಖಲಿಸಿದ್ದರು. ಸಾಮಾನ್ಯವಾಗಿ ದಲಿತ ದೌರ್ಜನ್ಯ ಕೇಸ್ ಗಳೆಲ್ಲವೂ ಮಾತುಕತೆಗಳಿಂದಲೇ ಪರಿಹಾರವಾಗುತ್ತಿದೆ. ಈ ಪ್ರಕರಣವೂ ಮಾತುಕತೆಯಲ್ಲಿಯೇ ಮುಕ್ತಾಯವಾಗಿದೆ.

ಇದಾದ ಬಳಿಕ ಆರೋಪಿಗಳು ಜೂನ್ 5ರಂದು ವಿನೋದ್ ಮೇಲೆ ಪ್ರತಿಕಾರ ತೀರಿಸಿದ್ದು, ಒಬ್ಬನೇ ಇದ್ದ ಸಂದರ್ಭದಲ್ಲಿ ಆತನಿಗೆ ಸ್ಟಿಕ್ ಬಳಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ವಿನೋದ್ ಬಮ್ನಿಯಾ ಶ್ರೀಗಂಗಾನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಈ ದೂರಿನ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಅನಾಗರಿಕ ಜಾತಿ ಪ್ರತಿಪಾದಕರಿಗೆ ಇನ್ನೆಷ್ಟು ದಲಿತ ಯುವಕರ ರಕ್ತ ಬೇಕೋ ಗೊತ್ತಿಲ್ಲ. ಆದರೆ, ಇಂತಹ ಘಟನೆಗಳ ಸಂದರ್ಭದಲ್ಲಿ ಕೂಡ ದಲಿತ ಮುಖಂಡರು, ರಾಜಕೀಯ ನಾಯಕರು ಎಚ್ಚೆತ್ತುಕೊಳ್ಳುತ್ತಿಲ್ಲ, ಕನಿಷ್ಠ ಖಂಡಿಸುವುದನ್ನೂ ಮರೆತು ಬಿಟ್ಟಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ದೇಶಾದ್ಯಂತ ಇದೀಗ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ