ಅಪ್ರಾಪ್ತೆಯ ಜೊತೆಗೆ ಒಪ್ಪಿತ ದೈಹಿಕ ಸಂಪರ್ಕವೂ ಕಾನೂನು ಸಮ್ಮತವಲ್ಲ: ಹೈಕೋರ್ಟ್ - Mahanayaka

ಅಪ್ರಾಪ್ತೆಯ ಜೊತೆಗೆ ಒಪ್ಪಿತ ದೈಹಿಕ ಸಂಪರ್ಕವೂ ಕಾನೂನು ಸಮ್ಮತವಲ್ಲ: ಹೈಕೋರ್ಟ್

high court
28/06/2021

ಬೆಂಗಳೂರು: 17 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕಳ ಜೊತೆಗೆ ದೈಹಿಕ ಸಂಪರ್ಕ ಬೆಳೆಸಿದ ಯುವಕನಿಗೆ 3ನೇ ಬಾರಿಯೂ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ್ದು,  ಸಮ್ಮತಿಯ ದೈಹಿಕ ಫೋಕ್ಸೋ ಕಾಯ್ದೆಯ ಪ್ರಕಾರ ಅಪ್ರಾಪ್ತೆಯೊಂದಿಗೆ ಸಮ್ಮತಿಯ ದೈಹಿಕ ಸಂಪರ್ಕ ಕಾನೂನು ಸಮ್ಮತವಲ್ಲ ಎಂದು ಕೋರ್ಟ್ ಹೇಳಿದೆ.


Provided by

ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಪ್ರಶಾಂತ್ ಎಂಬ ಯುವಕನ ವಿರುದ್ಧ 2019ರ ನವೆಂಬರ್ 8ರಂದು ಬೆಂಗಳೂರಿನ ಅಪ್ರಾಪ್ತ ವಯಸ್ಕ ಸಂತ್ರಸ್ತೆಯ ಪೋಷಕರು ದೂರು ನೀಡಿದ್ದು,  ಅಪಹರಣ ಹಾಗೂ  ಚಿಕ್ಕಬಳ್ಳಾಪುರದ ಕಂಜೇನಹಳ್ಳಿಯಲ್ಲಿ 2019ರ ನವೆಂಬರ್ 8ರಿಂದ 20ರವರೆಗೆ ಬಂಧನದಲ್ಲಿಟ್ಟು ಆಕೆಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 363, 366, 376 ಹಾಗೂ ಫೋಕ್ಸೋ ಕಾಯ್ದೆಯ ಸೆಕ್ಷನ್ 6ರಡಿ ಎಫ್ ಐಆರ್ ದಾಖಲಿಸಿ, ನಗರದ ಸೆಷನ್ಸ್ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆ ಬಳಿಕ ಆರೋಪಿ ಪ್ರಶಾಂತ್  4ನೇ ಹೆಚ್ಚುವರಿ ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಕೋರ್ಟ್ ನಿರಾಕರಿಸಿತ್ತು. ಆ ಬಳಿಕ ಹೈಕೋರ್ಟ್ ಗೆ  ಅರ್ಜಿ ಸಲ್ಲಿಸಿದ್ದ. ಆದರೆ ಹೈಕೋರ್ಟ್ ಜಾಮೀನು ನಿರಾಕರಿಸಿತ್ತು. ಇದೀಗ ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಕೋರ್ಟ್ ಜಾಮೀನು ನಿರಾಕರಿಸಿದೆ.

ಯುವಕನ ವಾದ ಏನು?

ತಾನು ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದೇವೆ. ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ದೈಹಿಕ ಸಂಪರ್ಕ ನಡೆಸಿದ್ದೇವೆ. ಪೊಲೀಸ್ ಚಾರ್ಜ್ ಶೀಟ್ ನಲ್ಲಿ ಸ್ವ-ಇಚ್ಛೆಯಿಂದಲೇ ಯುವಕನೊಂದಿಗೆ ಹೋಗಿರುವುದಾಗಿ ಹೇಳಿದ್ದಾಳೆ. ಹಾಗಾಗಿ ಜಾಮೀನು ನೀಡಬೇಕು ಎಂದು ಯುವಕ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾನೆ.

ಹೈಕೋರ್ಟ್ ಹೇಳಿದ್ದೇನು?

ಯುವಕನ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ.ಕೆ.ಎಸ್.ಮುದಕಲ್ ಅವರಿದ್ದ ಏಕಸದಸ್ಯ ಪೀಠ, ಯುವಕ ತಾನು ಯುವತಿಯೊಂದಿಗೆ ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿದ್ದಾಗಿ ವಾದಿಸಿದ್ದಾನೆ. ಆದರೆ,  ಅಪ್ರಾಪ್ತೆಯ ಸಮ್ಮತಿ, ಕಾನೂನು ರೀತಿಯಲ್ಲಿ ಸಮ್ಮತಿ ಎನಿಸಿಕೊಳ್ಳುವುದಿಲ್ಲ. ಫೋಕ್ಸೋ ಕಾಯ್ದೆಯನ್ನು ಅಪ್ರಾಪ್ತರ ಕಲ್ಯಾಣಕ್ಕಾಗಿಯೇ ಜಾರಿ ಮಾಡಲಾಗಿದೆ. ಹಾಗಾಗಿ ಅಪ್ರಾಪ್ತೆಯ ಸಮ್ಮತಿ ಪಡೆದುಕೊಂಡಿದ್ದೇನೆ ಎನ್ನುವುದು ಕಾನೂನು ಸಮ್ಮತವಲ್ಲ ಎಂದು ಹೇಳುವ ಮೂಲಕ ಯುವಕನ ಜಾಮೀನು ಅರ್ಜಿ ನಿರಾಕರಿಸಿದೆ.

ಇತ್ತೀಚಿನ ಸುದ್ದಿ