ದಲಿತರ ಜಮೀನಿನಲ್ಲಿ ವಸತಿಶಾಲೆಗೆ ಭೂಮಿಪೂಜೆ | ದಿಕ್ಕೇ ಕಾಣದೇ ಆತ್ಮಹತ್ಯೆಗೆ ಯತ್ನಿಸಿದ ದಲಿತ ರೈತ - Mahanayaka

ದಲಿತರ ಜಮೀನಿನಲ್ಲಿ ವಸತಿಶಾಲೆಗೆ ಭೂಮಿಪೂಜೆ | ದಿಕ್ಕೇ ಕಾಣದೇ ಆತ್ಮಹತ್ಯೆಗೆ ಯತ್ನಿಸಿದ ದಲಿತ ರೈತ

muttappa harijan in hospital
07/07/2021


Provided by

ಹಾವೇರಿ:  ಗುತ್ತಲ ಸಮೀಪದ ಅಕ್ಕೂರ ಗ್ರಾಮದಲ್ಲಿ ಬಗರ್ ಹುಕುಂ ಜಾಮೀನು ಸಾಗುವಳಿ ವಿವಾದ ಹಿನ್ನೆಲೆಯಲ್ಲಿ ದಲಿತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪ್ರಕರಣದಲ್ಲಿ ಹಾವೇರಿ ಶಾಸಕರ ವಿರುದ್ಧ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಮುತ್ತಪ್ಪ ಹರಿಜನ ಎಂಬ ದಲಿತ  ರೈತ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು,  ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.  ಹಾವೇರಿ ಜಿಲ್ಲಾಸ್ಪತ್ರೆಗೆ ಅವರನ್ನು ಮೊದಲು ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

20 ವರ್ಷಗಳಿಂದ ಬಗರ್‌ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ನಮ್ಮ ಜಮೀನಿನಲ್ಲಿ ಸೋಮವಾರ ವಸತಿಶಾಲೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಇದರಿಂದ ನೊಂದು ನನ್ನ ಪತಿ ವಿಷ ಸೇವಿಸಿದ್ದಾರೆ. ಇದಕ್ಕೆ ಹಾವೇರಿ ಶಾಸಕ ನೆಹರು ಓಲೇಕಾರ ಕಾರಣ ಎಂದು ಮುತ್ತಪ್ಪ ಹರಿಜನ್ ಅವರ ಪತ್ನಿ ಕಸ್ತೂರವ್ವ ಆರೋಪಿಸಿದ್ದಾರೆ.

ಕಸ್ತೂರವ್ವ ಆರೋಪ ಸುಳ್ಳು. ಬಡಮಕ್ಕಳ ಭವಿಷ್ಯದ ದೃಷ್ಟಿಯಿಂದ ಗೋಮಾಳ ಜಾಗದಲ್ಲಿ ವಸತಿ ಶಾಲೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಗಂಡ-ಹೆಂಡಿರ ಜಗಳದಿಂದ ಮುತ್ತಪ್ಪ ವಿಷ ಸೇವಿಸಿರಬಹುದು ನಮಗೂ  ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯೊಂದಕ್ಕೆ ಶಾಸಕ ನೆಹರು ಓಲೇಕಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ