ಸಾವರ್ಕರ್ ವಿಜೃಂಭಣೆಯ ಹಿಂದೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆಮಾಚುವ ಹುನ್ನಾರ | ಮುನೀರ್ ಕಾಟಿಪಳ್ಳ ಆರೋಪ - Mahanayaka
5:06 AM Saturday 18 - October 2025

ಸಾವರ್ಕರ್ ವಿಜೃಂಭಣೆಯ ಹಿಂದೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆಮಾಚುವ ಹುನ್ನಾರ | ಮುನೀರ್ ಕಾಟಿಪಳ್ಳ ಆರೋಪ

muneer katipalla
07/11/2021

ಮಂಗಳೂರು: ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ಪ್ರಸ್ತಾಪದ ಹಿಂದೆ ಬಿಜೆಪಿಯ ಹಿಡೆನ್ ಅಜೆಂಡಾ ಅಡಗಿದೆ. ಮತದಾರರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಜೊತೆಗೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆಮಾಚುವ ಹುನ್ನಾರವೂ ಇದರ ಹಿಂದೆ ಇದೆ ಎಂದು ಸಿಪಿಐಎಂ ‌ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ ಹೇಳಿದರು.


Provided by

ನಗರದ ಬಜಾಲ್ ನ ಭಗತ್ ಸಿಂಗ್ ಭವನದಲ್ಲಿ ಜರುಗಿದ 23ನೇ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು,  ದೆಹಲಿಯಿಂದ ಹಿಡಿದು ಸುರತ್ಕಲ್ ವರಗೆ ವಿಭಜನಾವಾದಿ ಸಾವರ್ಕರ್ ಹೆಸರನ್ನು ಮಾತ್ರ ಮೆರೆಸುವ ಬಿಜೆಪಿಗೆ, ತುಳುನಾಡಿನ ರಾಜಕಾರಣಕ್ಕೆ ಗೌರವ ತಂದು ಕೊಟ್ಟ ಅಭಿವೃದ್ದಿಯ ಹರಿಕಾರ ಶ್ರೀನಿವಾಸ ಮಲ್ಯ, ಭೂಮಸೂದೆ ಕಾಯ್ದೆ ರಚನೆಗೆ ಅರಸು ಸಂಪುಟದಲ್ಲಿ ಕೆಲಸ ಮಾಡಿದ ಸುಬ್ಬಯ್ಯ ಶೆಟ್ಟಿ, ಶಾಸಕ ಸ್ಥಾನಕ್ಕೆ ಘನತೆ ತಂದು ಕೊಟ್ಟ ನಾಗಪ್ಪ ಆಳ್ವ, ಕೃಷ್ಣ ಶೆಟ್ಟಿ ತಾರತಮ್ಯ ರಹಿತ ಸಮಾಜಕ್ಕಾಗಿ ಕೆಲಸ ಮಾಡಿದ ಕುದ್ಮಲ್ ರಂಗರಾವ್, ಬಿ.ವಿ.ಕಕ್ಕಿಲ್ಲಾಯ ಮುಂತಾದ ತುಳುನಾಡಿನ ಹೆಮ್ಮೆಯ ಪುತ್ರರು ನೆನಪಾಗದಿರುವುದು ಆಕಸ್ಮಿಕ ಅಲ್ಲ. ಜನರ ಮಧ್ಯೆ ಸೌಹಾರ್ದ, ಅಭಿವೃದ್ದಿಗಾಗಿ ಕೆಲಸ ಮಾಡಿದ ಇಂತಹ ಮಹಾನ್ ಚೇತನಗಳನ್ನು ಜನಮಾನಸದಿಂದ ಮರೆಯಾಗಿಸುವ ಮೂಲಕ ಹಿಂಸಾ ರಾಜಕಾರಣದ ಐಕಾನ್ ಗಳನ್ನು ಮುನ್ನಲೆಗೆ ತರಲು ಬಿಜೆಪಿ ಪರಿವಾರ ಶ್ರಮಿಸುತ್ತಿದೆ. ಇದರ ಭಾಗವಾಗಿಯೇ ಸಾವರ್ಕರ್ ಹೆಸರಿನ ವಿಜೃಂಭಣೆ ನಡೆದಿದೆ ಎಂದು ಅವರು ಆರೋಪಿಸಿದರು.

ತುಳುವರು ಬಿಜೆಪಿಯ ಇಂತಹ ರಾಜಕೀಯ ಮಾಯಾಜಾಲಕ್ಕೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಕೋಟಿ ಚೆನ್ನಯರು, ಕಾನದ ಕಟದರು, ಕಾಂತಬಾರೆ, ಬೂದಬಾರೆಯರಂತಹ ಊಳಿಗಮಾನ್ಯ ವ್ಯವಸ್ಥೆಗೆ ಎದೆಗೊಟ್ಟು ನಿಂತ ವೀರರ ಪರಂಪರೆಯನ್ನು ಹೊಂದಿರುವ ತುಳುವ ಮಣ್ಣು ಶೋಷಕರ ಪ್ರತಿನಿಧಿಗಳಾದ ಬಿಜೆಪಿಯ ಕಣ್ಕಟ್ಟುಗಳನ್ನು ತಿರಸ್ಕರಿಸಬೇಕು. ಉದ್ಯೋಗ, ಆರೋಗ್ಯ, ಶಿಕ್ಷಣ ಸಹಿತ ಘನತೆಯ ಬದುಕಿಗಾಗಿ ಜಾತಿ, ಧರ್ಮಗಳನ್ನು ಮೀರಿ ಒಂದಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಸಿಪಿಐಎಂ ದ.ಕ. ಜಿಲ್ಲಾ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯರಾದ ದಿನೇಶ್ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಜಯಂತಿ ಬಿ. ಶೆಟ್ಟಿ , ಪ್ರದೀಪ್‌ ಉರ್ವಸ್ಟೋರ್, ಸ್ವಾಗತ ಸಮಿತಿ ಅಧ್ಯಕ್ಷರಾದ ಸುರೇಶ್ ಬಜಾಲ್, ಕೋಶಾಧಿಕಾರಿ ವರಪ್ರಸಾದ್ ಬಜಾಲ್ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಕಾರ್ಯಧ್ಯಕ್ಷರಾದ ಸಂತೋಷ್ ಬಜಾಲ್ ವಹಿಸಿದ್ದರು.

ಸಮ್ಮೇಳನ ಉದ್ಘಾಟನಾ ಸಮಾರಂಭದ ವೇಳೆ ಪಕ್ಷದ ಹಿರಿಯ ಸಂಗಾತಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದೀಪಕ್ ಬಜಾಲ್ ಸ್ವಾಗತಿಸಿ ನಿರೂಪಿಸಿದರು ಕೋಶಾಧಿಕಾರಿ ವರಪ್ರಸಾದ್ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ