ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05 - Mahanayaka
3:43 PM Wednesday 15 - October 2025

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

kanada katada
09/11/2021

  • ಸತೀಶ್ ಕಕ್ಕೆಪದವು

ದಿನಗಳು ಉರುಳುತಿರಲು, ಪಾಂಬಲಜ್ಜಿಗ ಪೂಂಬಲಕರಿಯರು ಕಿಜನೊಟ್ಟುವಿನ ಮೂಲದ ಮಾನ್ಯರಾಗಿ ಚಾಕಿರಿ ಆರಂಭಿಸಿದವರಲ್ಲಿ ಪ್ರಮುಖರಾಗಿ ಬಿಂಬಿತರಾಗುತ್ತಾರೆ. ತಮ್ಮ ನಿಯತ್ತನ್ನು ಪಾಲಿಸಿಕೊಂಡು ಬರುತ್ತಾರೆ. ಗುತ್ತಿನ ಉಲ್ಲಾಯರು ಕಾಲಿನಿಂದ ತುಳಿದು ತೋರಿಸಿದ ಕೆಲಸವನ್ನು ತಲೆಯಲ್ಲಿ ಇಟ್ಟು ಆರಾಧಿಸುವಷ್ಟು ಪ್ರಾಮಾಣಿಕರಾಗಿ ರೂಪುಗೊಂಡಿದ್ದರು. ಉಲ್ಲಾಯರಿಗೆ ವಿಶ್ವಾಸದ ಆಳುಗಳಾಗಿ ಹತ್ತಿರ ಆಗುತ್ತಾರೆ. ಬಾಲಕರಲ್ಲಿ ಮದ, ಮತ್ಸರ, ಮೋಹ, ಲೋಭ, ಕಾಮ, ಕ್ರೋಧಗಳು ಎಳ್ಳಷ್ಟೂ ಇರಲಿಲ್ಲ. ಆ ಕಾರಣದಿಂದಾಗಿಯೇ ಜೈನ ಮನೆತನದ ನಂಬಿಕೆಗೆ ಪಾತ್ರರಾದರೆಂದರೂ ತಪ್ಪಾಗಲಾರದು. ಕಂದಮ್ಮ ಬೊಲ್ಲೆಯು ನೆರೆಹೊರೆಯವರ ಆಟಿಕೆಯಾಗಿ ಮುದ್ದು ಮುದ್ದಾಗಿ ಬೆಳೆಯುತ್ತಿರುವುದು ಪಾಂಬಲಜ್ಜಿಗ ಪೂಂಬಲಕರಿಯರ ಒಳಮನಸ್ಸಿನ ಖುಷಿಯನ್ನು ಇಮ್ಮಡಿಗೊಳಿಸುತ್ತಿತ್ತು. ಬೊಲ್ಲೆಯ ತೊದಲು ನುಡಿಗಳು ಆಸುಪಾಸಿನವರನ್ನು ನಕ್ಕುನಗಿಸುತ್ತಿತ್ತು. ಚುರುಕು ಬೆಳವಣಿಗೆ ಕಾಣುಗರ ಮೈಮನ ತುಂಬುತಿತ್ತಲ್ಲದೆ, ಸೌಮ್ಯ ಸ್ವಾಭಾವದ ಬೊಲ್ಲೆಯು ನೆರೆಹೊರೆಯವರ ಅಚ್ಚುಮೆಚ್ಚಿನ ಮನೆಮಗಳಾಗಿ ಬೆಳೆಯುತ್ತಿದ್ದಳು. ಈ ನಡುವೆ ಕರ್ಗಲ್ಲ ಪಿತ್ತ್ ಲಿನ ಕಾಂತುಬೈದನು ವರ್ಷಾವಧಿ ದೈವಗಳ ಕೋಲಕ್ಕಾಗಿ ಪಂಜದೂರಿಗೆ ತೆರಳಲು ಸಿದ್ದತೆ ನಡೆಸುತ್ತಿದ್ದನು. ಈ ವಿಚಾರವನ್ನು ಮಡದಿ ದೇಯಿಬೈದೆದಿಯಲ್ಲಿ ಹಂಚಿಕೊಳ್ಳಲು ಬಯಸುತ್ತಾನೆ. ಆಗ ಮದುವೆಯಾಗಿ ಅನೇಕ ವರ್ಷಗಳನ್ನೇ ಕಳೆದರೂ ಮಕ್ಕಳಾಗದಿರುವ ವ್ಯಥೆಯ ಕಥೆಯನ್ನು ಮತ್ತೆ ಮರುಕಲಿಸಿ ಮರುಗುತ್ತಾಳೆ. ಮಡದಿಯ ದುಃಖವನ್ನು ಅರಿತ ಗಂಡನು ಕಿಜನೊಟ್ಟುವಿನ ಬಲ್ಲಾಳರ ಒಕ್ಕಲು ಜನರಲ್ಲಿನ ಹೆಣ್ಣು ಮಗುವನ್ನು ಮೂಲಕ್ಕಾಗಿ ದತ್ತು ಪಡೆದು ಸಾಕಿ ಸಲಹಿಕೊಂಡು ಬರಲು ಸೂಚಿಸುತ್ತಾನೆ. ಗಂಡನ ಸಲಹೆಯನ್ನು ಅನುಸರಿಸಿ ದೇಯಿಬೈದೆದಿಯು ನೇರವಾಗಿ ಕಿಜನೊಟ್ಟುವಿಗೆ ಬರುತ್ತಾಳೆ. ಬಲ್ಲಾಳರನ್ನು ಬೇಟಿಮಾಡಿಕೊಂಡು ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ.


Provided by

ಕಿಜನೊಟ್ಟು ಬರ್ಕೆ ಯಲ್ಲಿ ಬೆಳೆಯುತ್ತಿರುವ ಬೊಲ್ಲೆಯು ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದರೂ, ಆಕೆಯ ಸಂಪೂರ್ಣ ( ತಮೆರಿ ) ಜವಾಬ್ದಾರಿ ಸೋದರ ಮಾವಂದಿರಾದ ಪಾಂಬಲಜ್ಜಿಗ ಪೂಂಬಲಕರಿಯರಿಗೆ ಸೇರಿದ್ದಾಗಿತ್ತು. ಆ ಕಾರಣದಿಂದಾಗಿ ದೇಯಿಬೈದೆದಿಯ ಮಾತನ್ನು ಅಲ್ಲಗಳೆಯದಿದ್ದರೂ ಪಾಂಬಲಜ್ಜಿಗ ಪೂಂಬಲಕರಿಯರ ಜೊತೆಗೆ ಚರ್ಚಿಸಿ ನಂತರವೇ ಒಂದು ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲು ಬಯಸುತ್ತಾರೆ.

ಅದರಂತೆ ಬಳ್ಳಾಲರು ಗುತ್ತುಮನೆಗೆ ಪಾಂಬಲಜ್ಜಿಗ ಪೂಂಬಲಕರಿಯರನ್ನು ಕರೆಸಿ ದೇಯಿಬೈದೆದಿಯ ಇಚ್ಛೆಯನ್ನು ಪ್ರಕಟಿಸುತ್ತಾರೆ.

“ದಿಕ್ಕ್ ಡ್ ಮುತ್ತುಂಡು ದೇಕಿಡ್ ಅರ್ಕ್ಂಡ್, ಇಲ್ಲಗ್ ಮುಲ್ಲಕಟ್ಟಾ ದೀಡ್ಂಡ್…………….
ಬೆನಲಾತ್ ಬೇಲೆ, ಉನಲಾತ್ ಉನ್ಪು ಕೊರ್ಯರ್, ಮೂಲ ಪತ್ತಯರ್, ಅರ್ತಿ ಪಿರ್ತಿಡ್ ಸಾಂಕ್ ಸಲಗಿಯರ್……….” ಹೀಗೆ ಕಳೆದ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುತ್ತಾರೆ. ಜೊತೆಗೆ ಇಂತಹ ಉಲ್ಲಾಯರಿಗೆ ಎರಡು ಬಗೆಯಲು ಬಯಸಲಾರೆವು. ಉಲ್ಲಾಯರ ತೀರ್ಮಾನವೇ ನಮ್ಮ ತೀರ್ಮಾನವೂ ಆಗಿದೆ. ಬೈದೆದಿಯ ಅಭಿಲಾಷೆಗೆ ತಮ್ಮ ಸಮ್ಮತಿಯನ್ನು ಸೂಚಿಸುತ್ತಾರಲ್ಲದೆ, ಮಗುವನ್ನು ದೂರ ಕಳುಹಿಸಿ ಕೊಡುವ ದುಃಖ ಉಕ್ಕಿ ಕಂಬನಿ ಹರಿದರೂ ತಮಗೆ ತಾವೇ ಸಮದಾನ ಪಡುತ್ತಾ ತಲೆ ತಗ್ಗಿಸಿ ನಿಂತುಕೊಳ್ಳುತ್ತಾರೆ.
ಆ ಬಳಿಕ ದೇಯಿ ಬೈದೆದಿಯನ್ನು ಬರ ಮಾಡಿಕೊಂಡು ಬೊಲ್ಲೆಯನ್ನು ಕಳುಹಿಸಿಕೊಡಲು ನಿರ್ಧರಿಸುತ್ತಾರೆ. “ಗಿಂಡ್ಯೆ ನೀರ್ ಡ್ ಪಂಜುರ್ಲಿ ಮೂಲೊಗು ಬಾಲೆ ಬೊಲ್ಲೆನ್ ದೇಯಪ್ಪೆ ಲೆತೊಬತ್ತಿ ಪೊರ್ತು” ಕಾನದ ಕಟದರ ಹುಟ್ಟು ಕಟ್ಟಲೆ ಉಚ್ಚರಿಸುವ ಸಂದರ್ಭದಲ್ಲಿ ಉಚ್ಚರಿಸುತ್ತೇವೆ. ಮುಂದಕ್ಕೆ ದೇಯಿ ಬೈದೆದಿಯ ಕುಟುಂಬದ ಸದಸ್ಯಳಾಗಿ ಸಾವು ಸೂತಕಾದಿ ಕಟ್ಟು ಪಾಡುಗಳಿಗೆ ಜೊತೆ ಜೊತೆಗೆ ಹೆಜ್ಜೆ ಹಾಕುವ ಅನಿವಾರ್ಯತೆಯನ್ನು ಎದುರಿಸ ಬೇಕಾಗುತ್ತದೆ.

ಮೂಲಕ್ಕೆಂದು ಪಡೆದ ಬೊಲ್ಲೆಯನ್ನು ದೇಯಿ ಬೈದೆದಿಯು ಅಕ್ಕರೆಯಿಂದ ಬೆಳೆಸುತ್ತಾಳೆ. ಹೆಣ್ಣು ಮಗಳು ಮತ್ತೊಬ್ಬರ ಮನೆ ಸೇರ ಬೇಕಾದವಳು. ಅದಕ್ಕಾಗಿಯೇ ಮನೆಗೆಲಸ, ಬಾಲ್ಯದಿಂದಲೇ ಜಾಗೃತವಾಗಬೇಕೆಂದು ಪೊರಕೆ ಹಿಡಿದು ಕಸ ಗುಡಿಸುತ್ತಾಳೆ, ಪೀಂಚಿಲು ಕತ್ತಿ ಅಟ್ಟದ ಬುಟ್ಟಿ ಕೊಟ್ಟು ದನದ ಹಟ್ಟಿಗೆ ಒಣ ಎಲೆಗಳ ” ಬಜಕ್ರೆ” ತರಿಸುತ್ತಾಳೆ. ಬೊಲ್ಲೆಯನ್ನು ಕೂಡಿಕೊಂಡು ಅಡರಪಾಡಿ ಸುತ್ತುತ್ತಾರೆ, ಸೊಪ್ಪು ಕಟ್ಟಿಗೆ ತರುತ್ತಾರೆ. ಮುಂಜಾನೆಯ ನಸುಕಿನಲ್ಲಿ ಕೊಡಪಾನ ತುಂಬಾ ನೀರನ್ನು ತಲೆಯ ಮೇಲಿಟ್ಟು, ಇನ್ನೊಂದು ಬಿಂದಿಗೆ ಸೊಂಟಕ್ಕೇರಿಸಿಕೊಂಡು ಸಾಲು ಸಾಲಾಗಿ ನೆಟ್ಟು ಬೆಳೆಸುತ್ತಿರುವ ಸೌತೆಕಾಯಿ ಸಾಲಿಗೆ, ಮೆನಸ್ಸಿನ ಗಿಡದ ಸಾಲಿಗೆ ನೀರು ಹಾಕುತ್ತಾರೆ. ಸುಗ್ಗಿ ಕಾಲ ಬಂತೆಂದರೆ “ಪರ್ದತ್ತಿ” ಹಿಡಿದು ಬೊಲ್ಲೆಯು ಎಲ್ಲರಿಗಿಂತ ಮೊದಲು ಮುನ್ನಡೆಯಲ್ಲಿದ್ದಳು‌. ಗದ್ದೆಯಲ್ಲಿ ಹಿರಿಯರ ಕೆಲಸ ಕಾರ್ಯದ ಚತುರತೆಯನ್ನು ಕಣ್ಣಂಚಿನಲ್ಲಿ ವೀಕ್ಷಿಸಿ ತಾನೂ ಸರಿಸಮಾನಳಾಗಿ ಸೈ ಎನಿಸಿದ್ದಳು. ಹಿರಿಯರ ಓಬೇಲೆ… ಕಬಿತ ಸಾಲಿಗೆ ತಾನೂ ಧ್ವನಿಗೂಡಿಸುತ್ತಿದ್ದಳು. ಈ ರೀತಿಯಾಗಿ ಬೊಲ್ಲೆಯು ಮಕ್ಕಳಿಲ್ಲದ ದೇಯಿ ಬೈದೆದಿಗೆ ಮಗಳಾಗಿ ಹತ್ತಿರವಾಗುತ್ತಾಳೆ. ದಿನಗಳೆದಂತೆ ಸರ್ವಸಂಪನ್ನೆಯಾಗಿ ಬೊಲ್ಲೆಯು ರೂಪುಗೊಳ್ಳಲು ದೇಯಿ ಬೈದೆದಿಯ ಪ್ರಾಮಾಣಿಕ ಪ್ರಯತ್ನವನ್ನು ನಾವು ಇಂದಿಗೂ ಸ್ಮರಿಸಬೇಕಾಗಿದೆ. ಬಾಲ್ಯದಲ್ಲೇ ಕಷ್ಟ ಸುಖಗಳನ್ನು ಸಮನಾಗಿ ಎದುರಿಸಿದ ಬೊಲ್ಲೆಯು ಯಾವತ್ತೂ ಧೈರ್ಯ ಕುಗ್ಗಲಿಲ್ಲ. ಬದುಕನ್ನು ಪಾಠವಾಗಿ ಸ್ವೀಕರಿಸಿ ಮಾದರಿಯಾಗುತ್ತಾಳೆ.

ದೇಯಿಯು ಮೂಲತಃ ಬಿರುವ ಜಾತಿಯವಳು, ಅಸ್ಪೃಶ್ಯಳು. ಈಕೆಗೆ ವಂಶ ಪಾರಂಪರ್ಯವಾಗಿ ಗಿಡಮೂಲಿಕೆಗಳ ಆತ್ಮೀಯತೆ ಅಂತರ್ಗತವಾಗಿತ್ತು. ವನ ಔಷಧಿಗಳಾದ ಎಲೆಚಿಗುರು ಮರಬೇರು ತೊಗಟೆ ಪಾಚಿಗಳು ಯಾವ ವ್ಯಾಧಿಗೆ ಯಾವ ಮದ್ದು ಎಂಬುದರ ಅರಿವು ಬೆರಳ ತುದಿಯ ಗಣಕಕ್ಕೆ ಸಾಧ್ಯವುಳ್ಳವಳಾಗಿದ್ದಳು. ವೈದ್ಯ ಪರಂಪರೆಯನ್ನು ಹೊಂದಿರುವ ಕಾರಣದಿಂದ ಬೈದ್ಯಳಾಗಿ/ಬೈದೆದಿಯಾಗಿ ಇತಿಹಾಸ ಪ್ರಸಿದ್ಧ ಮಹಿಳೆಯಾಗಿದ್ದಾಳೆ. ಮಾತೃ ಮೂಲದ ಕಾರಣದಿಂದಲೇ ತಾಯಿಯ ಜಾತಿ ಸೂಚಕವಾಗಿ ಮುಂದಕ್ಕೆ ಬಿರುವೆರ್ ಬೀರೆರ್ ಕೋಟಿ ಚೆನ್ನಯೆರ್ ಎಂಬುದಾಗಿ ಜಗತ್ತು ಕೊಂಡಾಡುತ್ತಿದೆ. ಅದೇ ಕೋಟಿ ಚೆನ್ನಯರು ತಾಯಿಯ ಪರಾಂಪರಗತ ವೈದ್ಯ ಗುಣದಿಂದಾಗಿ ಬೈದೆರ್ಲು ಎಂಬುದಾಗಿ ಕರೆಯಲ್ಪಡುವುದನ್ನು ಗಮನಿಸಬಹುದಾಗಿದೆ. ಇಂತಹ ಬೈದ್ಯಬನದ ಸ್ಪರ್ಶತೆ ಬೊಲ್ಲೆಗೆ ದೊರೆತಿರುವುದರಿಂದ ಬೊಲ್ಲೆಯ ಸಹ ನೆಲ ನೀರು ಮರಮಟ್ಟು ಎಲೆ ಚಿಗುರು ಮರ ಬೇರು ಗಿಡ ಮೂಲಿಕೆಗಳು ಚಿರಪರಿಚಿತ ಆದುವು. ತಾನು ತಕ್ಕಮಟ್ಟಿಗೆ ಮದ್ದು ನೀಡಲು ಸಮರ್ಥಳು ಎಂಬ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡಿದ್ದಳು.
ಹೀಗೆ ದಿನದಿಂದ ದಿನಕ್ಕೆ ಬೆಳವಣಿಗೆಯ ಬೊಲ್ಲೆಯು ಸೌಂದರ್ಯ ರಾಶಿಯಾಗಿ ರಚಿತವಾಗುತ್ತಿರುವುದು ದೇಯಿ ಬೈದೆದಿಯ ಹೆಣ್ತನದ ಸೂಕ್ಷ್ಮತೆಯನ್ನು ಚರುಕುಗೊಳಿಸುತ್ತಿತ್ತು. ( ಮುಂದಿನ ಸಂಚಿಕೆಯಲ್ಲಿ ಬೊಲ್ಲೆಯ ನೀರ ಮದಿಮೆ / ಮದುವೆ )

ಹಿಂದಿನ ಸಂಚಿಕೆ:

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು: 02

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04

 

ಇತ್ತೀಚಿನ ಸುದ್ದಿ