ಬೊಮ್ಮಾಯಿ ಮಡಿದವನ ಧರ್ಮ ನೋಡಿ ಸ್ಪಂದಿಸುವ ಮುಖ್ಯಮಂತ್ರಿ ಆಗಬಾರದಿತ್ತು: ಮುಸ್ಲಿಮ್ ಮುಖಂಡರಿಂದ ಖಂಡನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹತ್ಯೆಯನ್ನು ಖಂಡಿಸಿ ಹಾಗೂ ಮುಸ್ಲಿಮ್ ಸಮುದಾಯವನ್ನು ತೇಜೋವಧೆಗೊಳಿಸುವುದನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮುಸ್ಲಿಮ್ ಮುಖಂಡರು ಖಾಸಗಿ ಹೊಟೇಲ್ ನಲ್ಲಿ ಮಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಮಾಜಿ ಮೇಯರ್ ಕೆ.ಅಶ್ರಫ್, ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಮುಹಮ್ಮದ್ ಕುಞಿ ಮಾತನಾಡಿದರು.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಮಸೂದ್ ಎಂಬ ಯುವಕನ ಹತ್ಯೆ ಮತ್ತು ಅದರ ನಂತರದ ಆದ ಶಾಂತಿ ಸುವ್ಯವಸ್ಥೆ ಭಂಗ ಇತ್ಯಾದಿಗಳನ್ನು ಮುಸ್ಲಿಮ್ ಸಮುದಾಯವು ಸಾಮೂಹಿಕವಾಗಿ ಮತ್ತು ಕಟು ಶಬ್ದಗಳಿಂದ ಖಂಡಿಸುತ್ತದೆ. ಯಾವ ಧರ್ಮವು ಇಂತಹ ಬೆಳವಣಿಗೆಗಳನ್ನು ಎಂದಿಗೂ ಸಹಿಸುವುದಿಲ್ಲ ಎಂದರು.
ಪ್ರವೀಣ್ ನೆಟ್ಟಾರು ಎಂಬವರ ಹತ್ಯೆಯನ್ನು ದುಷ್ಕರ್ಮಿಗಳು ಎಸಗಿದ್ದಾರೆ. ಈ ಕೊಲೆಯನ್ನು ಕೂಡ ಮುಸ್ಲಿಮ್ ಸಮುದಾಯ ಕಟು ಶಬ್ದಗಳಲ್ಲಿ ಸಾಮೂಹಿಕವಾಗಿ ಸಮಾನವಾಗಿ ಖಂಡಿಸಿತು. ಪ್ರವೀಣ್ ನೆಟ್ಟಾರು ಹತ್ಯೆಯ ನಂತರದ ಬೆಳವಣಿಗೆಗಳಲ್ಲಿ ಪೊಲೀಸ್ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಮ್ ಇರುವಾಗ ಶವ ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಆರಾಧನಾ ಕೇಂದ್ರ, ಆಸ್ತಿ ಮತ್ತು ವಾಹನಗಳಿಗೆ ಹಾನಿಗೊಳಿಸಿದ್ದು ಖಂಡನೀಯ. ಇಂತಹ ಬೆಳವಣಿಗೆಗಳು ಮತೀಯ ಗಲಭೆಗೆ ಕುಮ್ಮಕ್ಕು ನೀಡುವಂತಿವೆ ಎಂದು ಕಿಡಿಕಾರಿದ್ದಾರೆ ಎಂದು ಆರೋಪಿಸಿದರು.
ಪ್ರವೀಣ್ ನೆಟ್ಟಾರು ಹತ್ಯೆಯ ನಂತರದ ಸಂತಾಪ ಭೇಟಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಸಚಿವರು, ಸಂಸದರು ಮತ್ತು ಶಾಸಕರೆಲ್ಲರೂ ಪ್ರವೀಣ್ ನೆಟ್ಟಾರುರವರ ನಿವಾಸಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಮತ್ತು ಪರಿಹಾರ ನೀಡುವಿಕೆಯನ್ನು ಮುಸ್ಲಿಮ್ ಸಮುದಾಯವು ಗೌರವಿಸುತ್ತದೆ. ಆದರೆ ಕೆಲವು ದಿನಗಳ ಹಿಂದೆ ಹತ್ಯೆಯಾದ ಮುಸ್ಲಿಮ್ ಸಮುದಾಯದ ಮಸೂದ್ ಎಂಬ ವ್ಯಕ್ತಿಯ ಮನೆಗೆ ಭೇಟಿ ನೀಡದೆ ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸದೆ ಹಿಂತಿರುಗಿದ ಮುಖ್ಯಮಂತ್ರಿಯವರ ನಡೆಯು ವಿಷಾದಕರ ಮತ್ತು ಖಂಡನೀಯ ಎಂದರು.
ರಾಜ್ಯದ ಏಳು ಕೋಟಿ ಜನರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು, ಸರ್ವರ ಮುಖ್ಯಮಂತ್ರಿಯಾಗಿದ್ದಾರೆ. ಅವರು ರಾಜ್ಯದ ಉನ್ನತ ಹುದ್ದೆಯ ಜವಾಬ್ದಾರಿ ಅರಿಯಬೇಕಿತ್ತು ಮತ್ತು ಮಡಿದವನ ಧರ್ಮ ನೋಡಿ ಪ್ರತಿಕ್ರಿಯೆ ನೀಡುವ ಮತ್ತು ಸ್ಪಂದಿಸುವ ಮುಖ್ಯಮಂತ್ರಿ ಆಗಬಾರದಿತ್ತು. ರಾಜಧರ್ಮ ಪಾಲಿಸುವಲ್ಲಿ ಅವರು ವಿಫಲರಾಗಿರುತ್ತಾರೆ. ಈ ನಡೆಯು ಜನಪ್ರತಿನಿಧಿಗಳು ನ್ಯಾಯ-ನೀತಿಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿರುವುದಾಗಿ ಕೈಗೊಳ್ಳುವ ಪ್ರತಿಜ್ಞೆಗೆ ವಿರುದ್ಧವಾಗಿದ್ದು, ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ತೀವ್ರ ಆತಂಕಕಾರಿ ಮತ್ತು ಗಂಡಾಂತರವಾಗಲಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























