ಆಗಸ್ಟ್ 29: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಅನಾವರಣ, ಶೋಭಾ ಯಾತ್ರೆ: ಶಾಸಕ ಹರೀಶ್ ಪೂಂಜ - Mahanayaka

ಆಗಸ್ಟ್ 29: ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಅನಾವರಣ, ಶೋಭಾ ಯಾತ್ರೆ: ಶಾಸಕ ಹರೀಶ್ ಪೂಂಜ

harish poonja
24/08/2022

“ಇಂಗ್ಲೆಂಡ್‌ ನ ಬಾವುಟ ಕಿತ್ತೆಸೆದು ಭಾರತದ ಬಾವುಟ ಹಾರಿಸಿದ್ದ ಕೆದಂಬಾಡಿ ರಾಮಯ್ಯ ಗೌಡ”

ಬೆಳ್ತಂಗಡಿ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಂಗ್ಲೆಂಡ್‌ ನ ಬಾವುಟವನ್ನು ಕಿತ್ತೆಸೆದು ನಮ್ಮ ನೆಲದ ಬಾವುಟವನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಹಾರಿಸಿ, 13 ದಿವಸಗಳ ಕಾಲ ಮಂಗಳೂರನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳಿಸಿದ ಸಂಘಟನಕಾರ ಸ್ವಾತಂತ್ರ್ಯ ಸಮರವೀರ, ತುಳುನಾಡಿನ ಕೆಚ್ಚೆದೆಯ ವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದ ಆ.29ರ ಶೋಭಾ ಯಾತ್ರೆಯಲ್ಲಿ ಬೆಳ್ತಂಗಡಿ ತಾಲೂಕಿನ ನಾಗರಿಕರಿಂದ ಭವ್ಯ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಆ.23ರಂದು ಬೆಳ್ತಂಗಡಿ ಎಸ್‌ ಡಿಎಂ ಕಲಾಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದವೆಂದು ಕರೆಯಲ್ಪಡುವ ಸಿಪಾಯಿದಂಗೆಕ್ಕಿಂತ 20 ವರುಷಗಳ ಮೊದಲು ಅಂದರೆ 1837 ರಲ್ಲಿ ಬ್ರಿಟಿಷರ ದೌರ್ಜನ್ಯ ಹಾಗೂ ದಬ್ಬಾಳಿಕೆಯ ವಿರುದ್ಧ ಶಸ್ತ್ರ ಸಜ್ಜಿತವಾಗಿ ಹೋರಾಡಲು ಸಾವಿರಾರು ಬೇರೆ ಬೇರೆ ಜನಾಂಗಕ್ಕೆ ಸೇರಿದ ರೈತಾ ಮಹಾ ಸೈನಿಕರನ್ನು ತನ್ನ ಮದುವೆಗದ್ದೆ ಜಮೀನಿನಲ್ಲಿ ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದವರು ಕೆದಂಬಾಡಿ ರಾಮಯ್ಯ ಗೌಡರು ಎಂದರು.

ರಕ್ತ ಸಿಕ್ತ ಹೋರಾಟದಲ್ಲಿ ಬ್ರಿಟಿಷರನ್ನು ಸದೆಬಡಿದು ಬ್ರಿಟಿಷರ ಇಂಗ್ಲೆಂಡ್‌ ನ ಬಾವುಟವನ್ನು ಕಿತ್ತೆಸೆದು ನಮ್ಮ ನೆಲದ ಬಾವುಟವನ್ನು ಈಗಿನ ಬಾವುಟಗುಡ್ಡೆಯಲ್ಲಿ ಹಾರಿಸಿ, 13 ದಿವಸಗಳ ಕಾಲ ಮಂಗಳೂರನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳಿಸಿದ ಸಂಘಟನಕಾರ ಸ್ವಾತಂತ್ರ್ಯ ಸಮರವೀರ, ತುಳುನಾಡಿನ ಕೆಚ್ಚೆದೆಯ ವೀರರಾಗಿದ್ದಾರೆ ಎಂದು ತಿಳಿಸಿದರು.

ಆ. 29ರಂದು ಸಂಪಾಜೆ ಗೇಟಿನ ಮುಖಾಂತರ ದ.ಕ ಜಿಲ್ಲೆಗೆ ಪುತ್ಥಳಿಯ ಶೋಭಾ ಯಾತ್ರೆ ಪ್ರವೇಶ ಮಾಡಲಿದ್ದು, ಸುಳ್ಯ, ಪುತ್ತೂರು, ಬಂಟ್ವಾಳದಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ರಮವಿದೆ. ಆ.29ರಂದು ಬಂಟ್ವಾಳದಲ್ಲಿ ಪ್ರತಿಮೆಯ ಶೋಭಾ ಯಾತ್ರೆ ವೇಳೆ ಬೆಳ್ತಂಗಡಿ ತಾಲೂಕಿನ ನಾಗರಿಕರಿಂದ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ತಾಲೂಕಿನಿಂದ ಸುಮಾರು 500 ಕ್ಕೂ ಹೆಚ್ಚು ವಾಹನಗಳಲ್ಲಿ ನಾಗರಿಕರು ಹೋಗಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ವಾಣಿ ಕಾಲೇಜು ಹಾಗೂ ಎಪಿಎಂಸಿ ಮೈದಾನದಲ್ಲಿ ಒಟ್ಟು ಸೇರಿ ಅಲ್ಲಿಂದ ವಾಹನದ ಮೂಲಕ ಬಂಟ್ವಾಳಕ್ಕೆ ತೆರಳಿ ಶೋಭಾ ಯಾತ್ರೆಯಲ್ಲಿ ಭಾಗವಹಿಸುದಾಗಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಗೌರವಾಧ್ಯಕ್ಷ ಪದ್ಮಗೌಡ ಬೆಳಾಲು, ಪಟ್ಟಣ ಪಂಚಾಯತು ಉಪಾಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ