ಕೇವಲ ತಿಂಡಿ ತಿನ್ನಲು ದಲಿತರ ಮನೆಗೆ ಬರಬೇಡಿ, ಕಷ್ಟಗಳನ್ನೂ ಕೇಳಿ!
	
	
	
	
	
ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಇಂದು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ದಲಿತ ಕುಟುಂಬ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಕರ್ನಾಟಕ ಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಈ ಭೇಟಿಗೆ ಹೆಚ್ಚಿನ ಪ್ರಚಾರಗಳೂ ಲಭಿಸಿದೆ. ಆದರೆ, ಊಟ ಮಾಡಲು, ತಿಂಡಿ ತಿನ್ನಲು ಮಾತ್ರವೇ ದಲಿತರ ಮನೆಗಳಿಗೆ ಬಿಜೆಪಿ ನಾಯಕರು ಹೋಗಬೇಡಿ, ಅವರ ಕಷ್ಟಗಳನ್ನು ಕೇಳಲು ಕೂಡ ಹೋಗಿ ಅನ್ನೋ ಮಾತುಗಳು ಕೇಳಿ ಬಂದಿವೆ.
ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಎನ್ನಲಾಗಿರುವ ವ್ಯಕ್ತಿಯೋರ್ವ 14 ದಲಿತ ಕಾರ್ಮಿಕ ಮಹಿಳೆಯರನ್ನು ಮನೆಯೊಂದರಲ್ಲಿ ಅಕ್ರಮವಾಗಿ ಬಂಧಿಸಿದ್ದು, ಗರ್ಭಿಣಿ ಮಹಿಳೆಗೆ ಹಲ್ಲೆ ಮಾಡುವ ವಿಡಿಯೋ ಹರಿದಾಡುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ಈ ಪ್ರದೇಶಕ್ಕೆ ಹೋಗಿ ಅವರ ಜೊತೆಗೆ ಸಮಾಲೋಚನೆ ನಡೆಸಿದರೆ ಉತ್ತಮವಲ್ಲವೇ? ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.
ಎಸ್ಟೇಲ್ ಮಾಲಿಕನಾಗಿರುವ ಜಗದೀಶ್ ಗೌಡ ಎಂಬಾತ ಈ ದೌರ್ಜನ್ಯ ನಡೆಸಿದ್ದು, ಈತ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ರಾಜಕೀಯವಾಗಿಯೂ ಬಲಾಢ್ಯನಾಗಿದ್ದಾನೆ. ಒಂದೆಡೆಯಲ್ಲಿ ದಲಿತ ಹೆಣ್ಣುಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಲಾಗುತ್ತಿದೆ. ಮತ್ತೊಂದೆಡೆಯಲ್ಲಿ ಬಿಜೆಪಿ ಪಕ್ಷದ ನಾಯಕರು ದಲಿತರ ಮನೆಯಲ್ಲಿ ಊಟ ಮಾಡ್ತಿದ್ದೇವೆ ಅಂತ ಹೇಳ್ತಿದ್ದಾರೆ. ಸಿಎಂ ಬೊಮ್ಮಾಯಿಯವರು ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರಿಗೆ ನಿಜವಾಗಿಯು ದಲಿತರ ಮೇಲೆ ಪ್ರೀತಿ ಇದ್ದರೆ, ಎಸ್ಟೇಟ್ ಮಾಲಿಕನ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳುವ ಮೂಲಕ ತಮ್ಮ ಬದ್ಧತೆಯನ್ನು ತೋರಿಸಬೇಕಿದೆ ಅನ್ನೋ ಅಭಿಪ್ರಾಯಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























