ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ನಳಿನ್ ಶಂಕುಸ್ಥಾಪನೆ: 60 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ - Mahanayaka
9:38 PM Sunday 14 - September 2025

ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ನಳಿನ್ ಶಂಕುಸ್ಥಾಪನೆ: 60 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ

praveen nettaru
02/11/2022

ಮಂಗಳೂರು: ಪ್ರವೀಣ್ ‌ನೆಟ್ಟಾರು ಕನಸಿನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಂಕು ಸ್ಥಾಪನೆ ಮಾಡಿದ್ದು, ಈ ಮೂಲಕ ಪ್ರವೀಣ್ ಕನಸು ನನಸು ಮಾಡಲು ಮುಂದಾಗಿದ್ದಾರೆ.


Provided by

ದ‌.ಕ.ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುವಿನಲ್ಲಿರುವ ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ ಹೊಸ ಮನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗಲಿದೆ. ಮನೆ ನಿರ್ಮಾಣದ ಜವಾಬ್ದಾರಿಯನ್ನು ಮೊಗರೋಡಿ ಕನ್ಸ್ ಸ್ಟ್ರಕ್ಷನ್ ಕಂಪನಿ ವಹಿಸಿಕೊಂಡಿದೆ.

ಪ್ರವೀಣ್ ಆಸೆಯಂತೆ ಮನೆ ನಿರ್ಮಿಸಿಕೊಡುವುದಾಗಿ ನಳಿನ್ ಕುಮಾರ್ ಕಟೀಲ್ ಕೆಲವು ದಿನಗಳ ಹಿಂದೆ ಭರವಸೆ ನೀಡಿದ್ದರು. ಅಂತೆಯೇ ಇಂದು ಬೆಳಗ್ಗೆ 9:30ಕ್ಕೆ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ  ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಪ್ರವೀಣ್ ನೆಟ್ಟಾರು ‌ಮನೆಗೆ ಶಂಕುಸ್ಥಾಪನೆ ‌ನೆರವೇರಿಸಿ ಮಾತನಾಡಿದ ‌ನಳಿನ್ ಕುಮಾರ್ ಕಟೀಲ್, ಪ್ರವೀಣ್ ಕನಸು ನನಸು ಮಾಡಲು ಪಕ್ಷ ಹೆಜ್ಜೆ ಇಟ್ಟಿದೆ.  ಅವರ ಹಳೆಯ ಮನೆ ಕೆಡವಿ ಇಂದು ಹೊಸ ಮನೆಗೆ ಗುದ್ದಲಿ ಪೂಜೆ ಮಾಡಿದ್ದೇವೆ. 60 ಲಕ್ಷ ವೆಚ್ಚದಲ್ಲಿ 2700 ಚ.ಅಡಿಯ ಮನೆ ನಿರ್ಮಾಣ ಆಗಲಿದೆ. ಮುಗ್ರೋಡಿ ಕನ್ಸ್ಟ್ರಕ್ಷನ್ ಕಂಪೆನಿ ಮೇ ಅಂತ್ಯದ ಒಳಗೆ ಮನೆ ನಿರ್ಮಾಣ ಮಾಡಿ ಕೊಡಲಿದೆ ಎಂದು ತಿಳಿಸಿದರು.

ಈಗಾಗಲೇ ಪ್ರವೀಣ್ ಪತ್ನಿಗೆ ಡಿಸಿ ‌ಕಚೇರಿಯಲ್ಲಿ ಕೆಲಸ ಸಿಕ್ಕಿದೆ. ಬಿಜೆಪಿಯಿಂದ 25 ಲಕ್ಷ, ಸರ್ಕಾರ 25 ಲಕ್ಷ ಹಾಗೂ ಯುವಮೋರ್ಛಾ 15 ಲಕ್ಷ ಕೊಟ್ಟಿದೆ.  ಪ್ರವೀಣ್ ನಮ್ಮ ಒಂದೊಳ್ಳೆ ಕಾರ್ಯಕರ್ತ ಹಾಗಾಗಿ ಅವನ ಕುಟುಂಬದ ಜೊತೆ ನಾವು ನಿಂತಿದ್ದೇವೆ. ಅವನ ಕೆಲಸಕ್ಕೆ ‌ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ, ಹಾಗಾಗಿ ಇಲ್ಲಿ ಹಣ ಮುಖ್ಯವಲ್ಲ, ಬಿಜೆಪಿ ಪಕ್ಷ ಕಾರ್ಯಕರ್ತನ ಕುಟುಂಬದ ಪರ ಯಾವತ್ತೂ ‌ನಿಲ್ಲಲಿದೆ. ನಾವು ಹತ್ಯೆಯಾದ ವೇಳೆಯೇ ಕುಟುಂಬದ ಜೊತೆ ನಿಲ್ಲುವ ಭರವಸೆ ಕೊಟ್ಟಿದ್ದೆವು ಎಂದರು.

ಅವನು ಪಕ್ಷಕ್ಕೆ ಸಾಕಷ್ಟು ಸಮಯ ಕೊಟ್ಟಿದ್ದ, ಹಾಗಾಗಿ ಪಕ್ಷ ಅವನ ಕುಟುಂಬದ ಪರ ನಿಂತಿದೆ. ಮನೆಯವರೇ ಕೊಟ್ಟ ನಕ್ಷೆಯ ಪ್ರಕಾರ ಈ ಮನೆ ನಿರ್ಮಾಣ ಆಗ್ತಿದೆ. ಹಲವಾರು ಮಂದಿ ‌ಮನೆ ಕಟ್ಟಿ ಕೊಡಲು ಮುಂದೆ ಬಂದಿದ್ದರು. ಆದರೆ ಅವರ ಮನೆಯವರ ಅಭಿಪ್ರಾಯದಂತೆ ಪಕ್ಷವೇ ಮನೆ ಕಟ್ಟಿ ಕೊಡ್ತಾ ಇದೆ. ಇಡೀ ಮನೆಯ ವೆಚ್ಚವನ್ನು ಬಿಜೆಪಿ ಪಕ್ಷ ಕೊಡ್ತದೆ ಎಂದರು.

ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಈಗಾಗಲೇ ಎಲ್ಲರ ಬಂಧನ ಆಗಿದೆ. ಆರ್ಥಿಕ ಸಹಕಾರ ಕೊಟ್ಟವರಿಗೆ ಲುಕ್ ಔಟ್ ನೋಟೀಸ್ ನೀಡಲಾಗಿದೆ.  ರಾಜ್ಯ ಮತ್ತು ಕೇಂದ್ರ ಸರ್ಕಾರ ‌ಸರಿಯಾದ ತನಿಖೆ ಮಾಡ್ತಿದೆ. ಇದರ ಹಿಂದೆ ಇರೋ ಎಲ್ಲಾ ಶಕ್ತಿಗಳನ್ನು ಬಂಧಿಸೋ ಕೆಲಸ ಆಗ್ತಿದೆ. ಪ್ರಮುಖ ಆರೋಪಿಗಳು ಜೈಲಿನ ಒಳಗೆ ಇದ್ದಾರೆ. ಆರ್ಥಿಕ, ವಾಹನ ಕೊಟ್ಟವರು, ಮಾನಸಿಕವಾಗಿ ಆರೋಪಿಗಳ ಜೊತೆ ನಿಂತವರನ್ನೂ ಬಿಡಲ್ಲ. ಇದಕ್ಕಾಗಿ ಎನ್ ಐಎ ತಪ್ಪಿಸಿಕೊಂಡವರ ಪತ್ತೆಗೆ ಬಹುಮಾನ ‌ಘೋಷಿಸಿದೆ. ಈಗಾಗಲೇ ಪ್ರವೀಣ್ ಹತ್ಯೆ ಬಳಿಕ ಪಿಎಫ್ ಐ ನಿಷೇಧ ಆಗಿದೆ. ಸದ್ಯ ‌ಹತ್ಯೆ ಕೇಸ್ ಆರೋಪಿಗಳು ಯಾವ ಕೋರ್ಟ್ ನಲ್ಲೂ ಹೊರ ಬರದ ಹಾಗೆ ಪ್ರಕರಣ ದಾಖಲಿಸಲಾಗಿದೆ.  ಎನ್ ಐಎ ಇದಕ್ಕೆ ಸಂಬಂಧಿಸಿ ಎಲ್ಲಾ  ರೀತಿಯ ಕೆಲಸ ಮಾಡ್ತಿದೆ ಎಂದು ಕಟೀಲ್ ಹೇಳಿದರು.

ಮನೆಯ ಗುದ್ದಲಿ ಪೂಜೆ ಬಳಿಕ ಪ್ರವೀಣ್ ಪತ್ನಿ ನೂತನ ಮಾತನಾಡಿ,  ಸಂಸದರು, ಸಚಿವರು ಮತ್ತು ಬಿಜೆಪಿ‌ ಮುಖಂಡರು ಪ್ರವೀಣ್ ‌ಕನಸಿಗೆ ಹೆಜ್ಜೆ ಇಟ್ಟಿದ್ದಾರೆ. ನಮ್ಮ ಮನೆಯವರ ಪರವಾಗಿ ಎಲ್ಲರಿಗೂ ಧನ್ಯವಾದ ಸಲ್ಲಿಸ್ತೇನೆ. ಎಲ್ಲಾ ಪಕ್ಷದ ನಾಯಕರು ನಮ್ಮ ‌ಜೊತೆಗೆ ನಿಂತಿದ್ದಾರೆ. ಆರೋಪಿಗಳನ್ನ ಹಿಡಿಯುವಲ್ಲೂ ಸಹಕಾರ ಮುಂದೆಯೂ ಸಿಗಲಿ, ಇನ್ನೂ ಆರು ಜನರ ಪತ್ತೆ ಆಗಬೇಕು, ಅವರನ್ನೂ ಹಿಡಿಯಲು ಎಲ್ಲರೂ ಸಹಕರಿಸಲಿ ಎಂದು ಮನವಿ ಮಾಡಿಕೊಂಡರು.

ಜುಲೈ 26ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಪ್ರವೀಣ್ ಹತ್ಯೆ ನಡೆದರೂ, ತಕ್ಷಣಕ್ಕೆ ಧಾವಿಸದ ಬಿಜೆಪಿ ನಾಯಕರ ವಿರುದ್ಧ ಕಾರ್ಯಕರ್ತರು ತಿರುಗಿಬಿದ್ದಿದ್ದರು.  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಸಚಿವರುಗಳು ಸ್ಥಳಕ್ಕೆ ಆಗಮಿಸಿದಾಗ ನಳಿನ್ ಕುಮಾರ್ ಕಟೀಲ್ ಅವರ ಕಾರು ಅಲುಗಾಡಿಸಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಸೃಷ್ಟಿಸಿತ್ತು. ಇದೀಗ ಪ್ರವೀಣ್ ಕುಟುಂಬದ ಜೊತೆಗೆ ಬಿಜೆಪಿ ನಿಂತಿದ್ದು, ನೊಂದ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಮುಂದಾಗಿದೆ.

ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಭಾಗಿಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ