ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಧರ್ಮಪ್ರಾಂತ್ಯದ ದಶಮಾನೋತ್ಸವ - Mahanayaka
11:31 AM Monday 15 - September 2025

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಧರ್ಮಪ್ರಾಂತ್ಯದ ದಶಮಾನೋತ್ಸವ

aannual parama prasada
20/11/2022

ಉಡುಪಿ : ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಧರ್ಮಪ್ರಾಂತ್ಯದ ಉಗಮದ ದಶಮಾನೋತ್ಸವ ಸಮಾರಂಭ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನಲ್ಲಿ ಭಕ್ತಿ ಭಾವದೊಂದೊಂದಿಗೆ ಜರುಗಿತು.


Provided by

ಪರಮ ಪ್ರಸಾದ ಮೆರವಣಿಗೆಯ ಬಲಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಧಾರ್ಮಿಕ ಪ್ರವಚನ ನೀಡಿ ಇಂದು ನಾವು ಕ್ರಿಸ್ತ ರಾಜರ ಮಹೋತ್ಸವವನ್ನು ಆಚರಿಸುತ್ತಿದ್ದು ಯೇಸುಕ್ರೀಸ್ತರು ಪ್ರತಿಯೊಬ್ಬರು ಶಾಂತಿ ಮತ್ತು ಕ್ಷಮೆಯ ದೂತರಾಗಬೇಕು ಎನ್ನುವ ಸಂದೇಶವನ್ನು ತನ್ನ ಜೀವನದಲ್ಲಿ ಬದುಕಿ ತೋರಿಸಿದ್ದು ಅದರಂತೆ ನಾವೂ ಕೂಡ ಅವರ ಮಾರ್ಗದಲ್ಲಿ ಸಾಗಬೇಕು ಎಂದರು.

ಬಲಿಪೂಜೆಯ ಬಳಿಕ ದಿವ್ಯ ಜ್ಯೋತಿ ನಿರ್ದೇಶಕರಾದ ವಂ ಸಿರಿಲ್ ಲೋಬೊ ಅವರು ಪರಮಪ್ರಸಾದದ ಆರಾಧನೆಯನ್ನು ನೆರವೇರಿಸಿದರು. ಬಳಿಕ ಪರಮ ಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಮಿಲಾಗ್ರಿಸ್ ಕ್ಯಾಥೆಡ್ರಲ್ ನಿಂದ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ವರೆಗೆ ಸಾರ್ವಜನಿಕವಾಗಿ ಕೊಂಡೊಯ್ದು ಗೌರವ ಸಲ್ಲಿಸಲಾಯಿತು.

ಮೌಂಟ್ ರೋಸರಿ ಚರ್ಚಿನಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಡುಪಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂ| ಜೋನ್ಸನ್ ಅವರು ಪವಿತ್ರ ಬೈಬಲ್ ನ ವಾಚನ ನೆರವೇರಿಸಿ ಪರಮ ಪ್ರಸಾದ ಕುರಿತು ಸಂದೇಶ ನೀಡಿ ಪರಮ ಪ್ರಸಾದವು ಏಕತೆ ತ್ಯಾಗ ಮತ್ತು ಕ್ಷಮೆಯ ಸಂಕೇತವಾಗಿದ್ದು ನಿಜವಾದ ಪ್ರೀತಿಯು ನಮ್ಮ ನೆರೆಹೊರೆಯವರಲ್ಲಿ ತೋರಿಸುವುದರಲ್ಲಿ ಅಡಕವಾಗಿದೆ ಎಂದರು. ಬಳಿಕ ಧರ್ಮಾಧ್ಯಕ್ಷರು ಪರಮ ಪ್ರಸಾದ ಸಾರ್ವಜನಿಕ ಆಶೀರ್ವಚನವನ್ನು ನೀಡಿದರು.

ಧರ್ಮಪ್ರಾಂತ್ಯದ ದಶಮಾನೋತ್ಸವ ಸಂಭ್ರಮ

ಉಡುಪಿ ಧರ್ಮಪ್ರಾಂತ್ಯ ಆರಂಭವಾಗಿ ಹತ್ತು ವರ್ಷಗಳು ಸಂದಿದ್ದು ಇದರ ನೆನಪಿಗಾಗಿ ಅದ್ದೂರಿ ಸಂಭ್ರಮವನ್ನು ಮಾಡದೆ ಸಮುದಾಯದ ಅಗತ್ಯಕ್ಕಾಗಿ ಆರೋಗ್ಯ ನಿಧಿಗೆ ಧರ್ಮಾಧ್ಯಕ್ಷರು ಚಾಲನೆ ನೀಡಿದರು. ಅಲ್ಲದೆ ಧರ್ಮಪ್ರಾಂತ್ಯದ ಚರಿತ್ರೆ, ಧರ್ಮಪ್ರಾಂತ್ಯದ ವ್ಯಾಪ್ತಿಗೊಳಪಟ್ಟ ಚರ್ಚುಗಳ ಚರಿತ್ರೆಗಳನ್ನೊಂಡ ಪುಸ್ತಕಗಳು ಮತ್ತು ಧರ್ಮಪ್ರಾಂತ್ಯದ ಹತ್ತು ವರ್ಷಗಳ ಸಾಧನೆಯನ್ನು ಬಿಂಬಿಸುವ ಸಾಕ್ಷ್ಯಚಿತ್ರ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಧರ್ಮಪ್ರಾಂತ್ಯಕ್ಕೆ ತನ್ನ ನಿಸ್ವಾರ್ಥ ಹಾಗೂ ಪ್ರೀತಿ ಪೂರ್ವಕ ಸೇವೆ ನೀಡಿದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಧರ್ಮಾಪ್ರಾಂತ್ಯದ ಪರವಾಗಿ ಸನ್ಮಾನಿಸಲಾಯಿತು.

ಸ್ವಚ್ಚ ಹಾಗೂ ಶಿಸ್ತು ಬದ್ದ ಮೆರವಣಿಗೆ

ಪರಮ ಪ್ರಸಾದ ಮೆರವಣಿಗೆಯಲ್ಲಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು 4,000ಕ್ಕೂ ಮಿಕ್ಕಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಶಿಸ್ತುಬದ್ದವಾಗಿ ನಡೆಯಿತು. ದಾರಿಯುದ್ದಕ್ಕೂ ಭಕ್ತಾದಿಗಳಿಗೆ ನೀಡಿದ ನೀರಿನ ಬಾಟಲಿಗಳು ಎಲ್ಲಿಯೂ ಎಸೆಯದಂತೆ ಸ್ವಯಂ ಸೇವಕರೇ ಸ್ವತಃ ಒಟ್ಟು ಮಾಡಿ ಸ್ವಚ್ಚತೆ ಕಾಪಾಡಿದರು ಅಲ್ಲದೆ ಭಾರತೀಯ ಕಥೊಲಿಕ ಯುವ ಸಂಚಾಲನದ ಸದಸ್ಯರು ರಸ್ತೆಯಲ್ಲಿ ಮೆರವಣಿಗೆ ಶಿಸ್ತುಬದ್ಧವಾಗಿ ಸಾಗಲು ಸಹಕರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಕುಲಪತಿ ವಂ|ರೋಶನ್ ಡಿಸೋಜಾ, ಶಿರ್ವ ವಲಯ ಪ್ರಧಾನ ಧರ್ಮಗುರು ವಂ|ಲೆಸ್ಲಿ ಡಿಸೋಜಾ, ಕಲ್ಯಾಣಪುರ ಮಿಲಾಗ್ರಿಸ್ ಕಾಥೆಡ್ರಲ್ ನ ರೆಕ್ಟರ್ ವ|ವಲೇರಿಯನ್ ಮೆಂಡೊನ್ಸಾ,  ಕಾರ್ಕಳ ವಲಯ ಪ್ರಧಾನ ಧರ್ಮಗುರು ವಂ| ಪಾವ್ಲ್ ರೇಗೊ, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ|ರೊಕ್ ಡೆಸಾ, ಉದ್ಯಾವರ ಚರ್ಚಿನ ಧರ್ಮಗುರು ವಂ|ಸ್ಟ್ಯಾನಿ ಬಿ ಲೋಬೊ, ಧರ್ಮಪ್ರಾಂತ್ಯದ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಹಾಗೂ ಇತರ ಹಿರಿಯ ಧರ್ಮಗುರುಗಳು ಉಪಸ್ಥಿತರಿದ್ದರು. ಕುಟುಂಬ ಆಯೋಗದ ನಿರ್ದೇಶಕ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ