ಕಾಂಗ್ರೆಸ್—ಜೆಡಿಎಸ್ ಕುಟುಂಬವನ್ನು ಪೋಷಿಸಿಕೊಂಡಿದೆ, ವಿಕಾಸ ಮಾಡಿಲ್ಲ: ಬೆಳ್ತಂಗಡಿಯಲ್ಲಿ ಗೋವಾದ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ
 
	
	
	
	
	
ಬೆಳ್ತಂಗಡಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಕುಟುಂಬಗಳನ್ನು ಪೋಷಿಸಿಕೊಂಡಿವೆಯೇ ಹೊರತು ಕರ್ನಾಟಕದ ವಿಕಾಸ ಮಾಡಿಯೇ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ ಕೇಂದ್ರ — ರಾಜ್ಯದ ಅಭಿವೃದ್ಧಿ ಎಲ್ಲರ ಕಣ್ಣ ಮುಂದಿದೆ ಅದನ್ನು ಗ್ರಾಮ ಗ್ರಾಮಕ್ಕೆ ತಲುಪಿಸುವ ಕಾರ್ಯ ಆಗಬೇಕು ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ ಹೇಳಿದರು
ಅವರು ಭಾನುವಾರ ಬೆಳ್ತಂಗಡಿ ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿಯವರ ಸಾಧನೆಗಳಿಂದ ಮುಂದಿನ ಬಾರಿಯೂ ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಬರಲಿದೆ. ಹಿಂದಿನ ಯು.ಪಿ.ಎ. ಹಾಗೂ ಈಗಿನ ಎನ್.ಡಿ.ಎ. ಸರಕಾರಗಳ ತುಲನೆ ಮಾಡಿದಾಗ ಈಗಿನ ಸರಕಾರ ಅಭಿವೃದ್ಧಿ ಕಾರ್ಯಗಳು ಹೇಗಿವೆ ಎಂಬುದು ಅರಿವಾಗುತ್ತದೆ ಎಂದರು.
ಮುಂದಿನ ಬಾರಿ ರಾಜ್ಯದಲ್ಲಿ 150 ಸೀಟು ಪಕ್ಷಕ್ಕೆ ಸಿಗಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉನ್ನತಿಯಾಗಲಿದೆ. ಕೇಂದ್ರದ ಹಾಗೂ ರಾಜ್ಯದ ರೈತರ, ಮಹಿಳೆಯರ, ಯುವಕರಿಗಾಗಿ ಮಾಡಿರುವ ಯೋಜನೆಗಳನ್ನು ಗ್ರಾಮಗಳಿಗೆ ಮುಟ್ಟಿಸುವ ಕೆಲಸವನ್ನು ಒಗ್ಗಟ್ಟಾಗಿ, ಜೊತೆಯಾಗಿ ಮಾಡೋಣ, ನವಭಾರತ, ನವಕರ್ನಾಟಕ್ಕಾಗಿ ಸಂಕಲ್ಪಿಸೋಣ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು, ಬೆಳ್ತಂಗಡಿಯಲ್ಲಿ ಪ್ರತಿಸ್ಪರ್ಧಿ ಚುನಾವಣೆಗೆ ನಿಲ್ಲುವ ಅವಶ್ಯಕತೆಯೇ ಇಲ್ಲ. ನಿಂತರೆ ಠೇವಣಿ ಕಳೆದುಕೊಳ್ಳುವುದು ಖಚಿತ. ರಾಜ್ಯದಲ್ಲಿ ಮತ್ತೊಮೆ ಬಿಜೆಪಿ ಸರಕಾರ ಬರುವುದು ಖಚಿತವಾಗಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ,ಸಚಿವ ಸುನಿಲ್‌ಕುಮಾರ್ ಮಾತನಾಡಿ, ಶಾಸಕರ ಅಭಿವೃದ್ಧಿ ಕಾರ್ಯಗಳು, ಚಟುವಟಿಕೆಗಳನ್ನು ಗ್ರಾಮಗಳಿಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದರು
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ದ.ಕ.ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ವಿಜಯ ಸಂಕಲ್ಪ ಯಾತ್ರೆ ಸಹ ಸಂಚಾಲಕ ದತ್ತಾತ್ರಿ ಎಸ್., ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್, ಪ್ರ. ಕಾರ್ಯದರ್ಶಿ ಸುಧೀರ್ ಶೆಟ್ಟಿ, ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಕಾರ್ಯದರ್ಶಿ ಧನಲಕ್ಷ್ಮೀ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರ. ಕಾರ್ಯದರ್ಶಿಗಳಾದ ಶ್ರೀನಿವಾಸ್ ರಾವ್ ಮತ್ತು ಗಣೇಶ್ ಗೌಡ, ಎಸ್.ಟಿ. ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಉಪಸ್ಥಿತರಿದ್ದರು.
ಇಲ್ಲಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಯಾತ್ರೆಯನ್ನು ಪ್ರಾರಂಭಿಸಲಾಯಿತು. ಶಾಸಕ ಹರೀಶ ಪೂಂಜ ಸ್ವಾಗತಿಸಿದರು. ಬೆಳ್ತಂಗಡಿ ಮುಖ್ಯರಸ್ತೆಯಲ್ಲಿ ಯಾತ್ರೆ ಮುಂದುವರಿದು ಲಾಯಿಲದಲ್ಲಿ ಮುಕ್ತಾಯಗೊಂಡಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw





 
 























