ಗುಂಡ್ಲುಪೇಟೆಯ ಈ ಊರಲ್ಲಿ ವಿಭಿನ್ನ ಯುಗಾದಿ | ಹುಲಿ, ಕರಡಿ ವೇಷ ಜೊತೆಗೆ ಬಣ್ಣದ ರಂಗಿನಾಟ

ಚಾಮರಾಜನಗರ: ಯುಗಾದಿ ಬಂತೆಂದರೆ ಪ್ರಕೃತಿಯಲ್ಲಿ ನವೋಲ್ಲಾಸದ ಸಂಭ್ರಮ. ಅದೇ ರೀತಿ, ಹಿಂದೂಗಳ ಹೊಸ ವರ್ಷವಾದ ಯುಗಾದಿಯನ್ನು ಹಳೇ ಮೈಸೂರು ವಿಶೇಷವಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಬಣ್ಣದ ರಂಗಿನಿಂದ ಸ್ವಾಗತಿಸುವುದು ನಡೆದುಬಂದ ವಾಡಿಕೆಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಯುಗಾದಿಯಂದು ಹೊನ್ನೇರು ಕಟ್ಟಿ ಕೃಷಿ ಚಟುವಟಿಕೆ ಆರಂಭಿಸಿದರೇ ವರ್ಷತೊಡಕಿನಂದು ಹಿರಿಯರಾದಿಯಾಗಿ ಬಣ್ಣದ ಓಕುಳಿ ಆಡಿ ಯುಗಾದಿಯನ್ನು ಸಂಭ್ರಮಿಸುತ್ತಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಂತೂ ಇನ್ನೂ ವಿಶೇಷವಾಗಿ ಆಚರಣೆ ಮಾಡಲಿದ್ದು ವಿಭಿನ್ನ ವೇಷ ಹಾಕುತ್ತಾರೆ.
ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಬಣ್ಣದ ಓಕುಳಿ ಜೊತೆಗೆ ಕಳೆದ 3-4 ದಶಕಗಳಿಂದ ಹುಲಿ, ಕರಡಿ, ಜೋಕರ್ಗಳು, ಅಣಕು ಪಂಚಾಂಗ ಶ್ರವಣದ ವೇಷಧಾರಿಗಳು ಪ್ರತಿ ಮನೆ ಮನೆಗೂ ತೆರಳಿ ದವಸ-ಧಾನ್ಯ ಇಲ್ಲವೇ ಹಣ ಪಡೆಯುವ ಕುತೂಹಲಕಾರಿ ಪದ್ಧತಿ ಇದೆ.
ಕರಡಿ ವೇಷಧಾರಿಗಳು ಮೈಗೆ ಕಪ್ಪು ಬಣ್ಣ ಬಳಿದುಕೊಂಡು ಎತ್ತಿಗೆ ಕಟ್ಟುವ ಗೆಜ್ಜೆಗಳನ್ನು ಕಟ್ಟಿಕೊಳ್ಳುತ್ತಾರೆ. ಹುಲಿ ವೇಷಧಾರಿಗಳು ಹಳದಿ- ಕಪ್ಪು ಬಣ್ಣಗಳ ಪಟ್ಟೆಗಳನ್ನು ಲೇಪಿಸಿಕೊಂಡು ಜನರ ಮುಂದೆ ವಿವಿಧ ಕಸರತ್ತುಗಳನ್ನು ಮಾಡುತ್ತಾರೆ. ಪಾಳೇಗಾರರ ಯುದ್ಧ, ಪಂಚಾಂಗ ಶ್ರವಣದ ಅಣಕು, ಮೋಡಿ ವಿದ್ಯೆಯ ಅಣಕುಗಳನ್ನು ಮಾಡುತ್ತಾರೆ.
ಉಳಿದಂತೆ, ಪೊಲೀಸ್, ಕಳ್ಳ, ರಾಕ್ಷಸ, ಹನುಮ, ಒಂಟೆ ವೇಷಧಾರಿಗಳು ಆಗಾಗ್ಗೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಹಣ ಕೇಳುತ್ತಾರೆ. ಒಂದು ವೇಳೆ ಹಣ ಕೊಡದಿದ್ದರೆ ಮೈಗೆಲ್ಲಾ ಕಪ್ಪು ಬಣ್ಣ ಹಚ್ಚಿ ರಂಪವನ್ನೇ ಮಾಡುತ್ತಾರೆ.
ವರ್ಷಕ್ಕೊಮ್ಮೆ ನಡೆಯುವ ಈ ಸಂಭ್ರಮವನ್ನು ಸಾಮಾನ್ಯವಾಗಿ ಎಲ್ಲರೂ ಮನರಂಜನೆ ಎಂದೇ ಭಾವಿಸುತ್ತಾರೆ. ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಮಿಠಾಯಿ ಡಬ್ಬಿ, ತಕ್ಕಡಿಗಳನ್ನು ಹಾರಿಸುವ ಕರಡಿ, ಕೋತಿ ವೇಷಧಾರಿಗಳು ಬಳಿಕ ಮಾಲೀಕರನ್ನು ಸತಾಯಿಸಿ ಹಿಂತಿರುಗಿಸುತ್ತಾರೆ. ಬಣ್ಣ ಹಚ್ಚಿಸಿಕೊಳ್ಳದವರು ಕರಡಿ ವೇಷಧಾರಿಗಳನ್ನು ಕಂಡರೆ ನಿಜವಾಗಿಯೂ ಕರಡಿ ಬಂತು ಎಂದು ಬೆದರಿ ಓಡುವ ದೃಶ್ಯ ಈ ಊರಲ್ಲಿ ಸರ್ವೇ ಸಾಮಾನ್ಯ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw