ಬ್ರ್ಯಾಂಡ್ ಬೆಂಗಳೂರು ಹೆಸರು ಕೆಡಿಸಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾರ್ಚ್ 23: ಬ್ರ್ಯಾಂಡ್ ಬೆಂಗಳೂರು ಹೆಸರು ಕೆಡಿಸಲು ಸಾಧ್ಯವಿಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಾಯಂಡಹಳ್ಳಿ ವಾರ್ಡ್‍ನ ಪಂತರಪಾಳ್ಯಯಲ್ಲಿ ಆಯೋಜಿಸಿದ್ದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪಂತರ ಪಾಳ್ಯದಲ್ಲಿ ನಿರ್ಮಿಸಿರುವ “ಡಾ. ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಭಿವೃದ್ಧಿಪಡಿಸಲಾಗಿರುವ ನಾಯಂಡಹಳ್ಳಿ ಕೆರೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬ್ರ್ಯಾಂಡ್ ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ಎಲ್ಲ ನಗರಗಳಿಂತ ವೇಗವಾಗಿ ಅಭಿವೃದ್ಧಿಯಾಗಿದೆ. ಅದರೆ, ಕೆಲವರು ಇದರ ಹೆಸರ ಕೆಡಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.
ಅಭಿಮಾನ ಬೆಳೆಸಿಕೊಳ್ಳಬೇಕು
ಪ್ರತಿ ದಿನ ಐದು ಸಾವಿರ ವಿಜ್ಞಾನಿಗಳು ಬರುತ್ತಾರೆ. ಪ್ರತಿ ದಿನ 5000 ವಾಹನಗಳು ರಸ್ತೆಗಿಳಿಯುತ್ತವೆ. ಸುಮಾರು 400 ಆರ್ ಆಂಡ್ ಡಿ ಕೇಂದ್ರಗಳಿವೆ. ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7000 ಸಿಸಿ ಕ್ಯಾಮರಾಗಳನ್ನು ಹೆಣ್ಣು ಮಕ್ಕಳ ಸುರಕ್ಷತೆಗೆ ಕ್ಯಾಮರಾ ಅಳವಡಿಸಲಾಗಿದೆ. ರಾತ್ರಿಪಾಳಿಯಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡಲು ಅನುಮತಿ ನೀಡಲಾಗಿದೆ.
ಬೆಂಗಳೂರು ನಮ್ಮ ಹೆಮ್ಮೆ, ಪ್ರತಿಷ್ಠೆ, ಗೌರವ. ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಹೆಸರು ಉಳಿಸುವುದು ನಮ್ಮ ಕರ್ತವ್ಯ. ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತರುವ ಊರು ಬೆಂಗಳೂರು. ಬೆಂಗಳೂರಿನ ಬ್ರ್ಯಾಂಡ್ ಉಳಿಸಲು ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ನೈಜ ಸೇವೆ
ಚುನಾವಣೆ ಸಲುವಾಗಿ ಕೆಲಸ ಮಾಡುವುದು ಒಂದು ಕಡೆಯಾದರೆ, ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ ಅವರ ಸೇವೆ ಮಾಡಬೇಕು ಎನ್ನುವುದು ಸೇವೆ. ಸಮಯ ನೋಡಿ ಕೆಲಸ ಮಾಡುವುದು ಕರ್ತವ್ಯ, ಸಮಯಾತೀತವಾಗಿ ಕೆಲಸ ಮಾಡುವುದು ನಿಜವಾದ ಸೇವೆ ಎಂದರು.
ಮೂಲ ಸೌಕರ್ಯ ಅಭಿವೃದ್ಧಿ
ಸೋಮಣ್ಣ ವಸತಿ ಸಚಿವರಾಗಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ 3 ಲಕ್ಷಕ್ಕಿಂತ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. 85 ಸಾವಿರ ಮನೆಗಳನ್ನು ವಿತರಿಸಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಗುರಿ ಹೊಂದಿದ್ದು, ರಾಜ್ಯದಲ್ಲಿ 5 ಲಕ್ಷ ಮನೆ ಹಂಚಿಕೆ ಮಾಡಲಾಗುತ್ತಿದೆ.
ಗೋವಿಂದರಾಜನಗರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.ನಗರ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವುದು ಸುಲಭವಲ್ಲ. ಮೂಲ ಸೌಕರ್ಯ ಅಭಿವೃದ್ಧಿ ಜೊತಗೆ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದರು.
ಡಬಲ್ ಇಂಜಿನ್ ಸರ್ಕಾರ
ಇದು ಡಬಲ್ ಇಂಜಿನ್ ಸರ್ಕಾರ ಇದರ ಮೊದಲ ಇಂಜಿನ್ ಸೋಮಣ್ಣ ಇನ್ನೊಂದು ನಮ್ಮಸರ್ಕಾರ ಅತಿ ವೇಗದಲ್ಲಿ ಅನುಮತಿ ನೀಡಿದ್ದೇವೆ. ಹೀಗಾಗಿ ವೇಗವಾಗಿ ಕೆಲಸಗಳು ಆಗಿವೆ ಎಂದರು.
ಸಚಿವರಾದ ವಿ ಸೋಮಣ್ಣ ಮಾತನಾಡಿ, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಮಾದರಿ ಕ್ಷೇತ್ರವಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಮುಖ ಕಾರಣ. ಸ್ನೇಹಕ್ಕೋಸ್ಕರ ಒಂದು ಕ್ಷೇತ್ರಕ್ಕೆ ಒಬ್ಬ ಮುಖ್ಯಮಂತ್ರಿ ಹತ್ತಾರು ಬಾರಿ ಭೇಟಿ ನೀಡಿದ್ದು ನನ್ನ 45 ವರ್ಷಗಳ ರಾಜಕಾರಣ ದಲ್ಲೇ ಮೊದಲು. ಕ್ಷೇತ್ರದಲ್ಲಿ ಒಟ್ಟು 515 ಬೆಡ್ ಗಳ ಅತ್ಯಾಧುನಿಕ ಆಸ್ಪತ್ರೆಗಳು ನಿರ್ಮಾಣವಾಗಿವೆ. ಪುಂಡಪೋಕರಿಗಳ ತಾಣವಾಗಿದ್ದ ಸ್ಥಳದಲ್ಲಿ ಜನರಿಗೆ ಉಪಯೋಗಿ ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಕೆಲವೇ ದಿನಗಳಲ್ಲಿ ಈ ಆಸ್ಪತ್ರೆ ಸಾರ್ವಜನಿಕರ ಬಳಕೆಗೆ ತೆರೆಯಲಿದೆ ಎಂದರು.
ಸಚಿವ ಡಾ: ಕೆ.ಸುಧಾಕರ್, ಚಿತ್ರನಟ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw