ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಲೋಬೋ, ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈಗೆ ಟಿಕೆಟ್

ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ಮಾಜಿ ಶಾಸಕ ಜೆ.ಆರ್.ಲೋಬೋ ಅವರನ್ನು ಮತ್ತೆ ಕಣಕ್ಕಿಳಿಸಿದೆ.
ತೀವ್ರ ಕುತೂಹಲ ಸೃಷ್ಟಿಸಿರುವ ಪುತ್ತೂರು ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಆಪ್ತ ಹಾಗೂ ಬಿಜೆಪಿಯಿಂದ ಪಕ್ಷಾಂತರಗೊಂಡಿರುವ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ. ಆದ್ರೆ ಮಂಗಳೂರು ನಗರ ಉತ್ತರ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.
ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಮುಂದುವರಿದಿದೆ. ಮಾಜಿ ಶಾಸಕ ಜೆ.ಆರ್.ಲೋಬೊ ಮೂರನೇ ಬಾರಿಗೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸತತ ನಾಲ್ಕು ಬಾರಿ ಶಾಸಕರಾಗಿದ್ದ ಎನ್.ಯೋಗೀಶ್ ಭಟ್ ರನ್ನು 2013ರ ಚುನಾವಣೆಯಲ್ಲಿ 12,275 ಮತಗಳ ಅಂತರದಿಂದ ಮಣಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿದ್ದ ಜೆ.ಆರ್.ಲೋಬೊ, 2018ರ ಚುನಾವಣೆಯಲ್ಲಿ ಬಿಜೆಪಿಯ ಡಿ.ವೇದವ್ಯಾಸ ಕಾಮತ್ ವಿರುದ್ಧ 16,075 ಮತಗಳ ಅಂತರದಿಂದ ಸೋಲುಂಡಿದ್ದರು. 70 ವರ್ಷದ ಲೋಬೊ ಶಾಸಕರಾಗಿದ್ದಾಗ ಮಂಗಳೂರು ನಗರಕ್ಕೆ 750 ಕೋ.ರೂ. ಮೊತ್ತದ ‘ಜಲಸಿರಿ’ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆ ಸಹಿತ ಅನೇಕ ಯೋಜನೆಗಳ ಕಾಮಗಾರಿಯನ್ನು ಅನುಷ್ಠಾನಗೊಳಿಸಿದ್ದರು.
ಜಾನ್ ರಿಚರ್ಡ್ ಲೋಬೊ ತನ್ನ 23ರ ಹರೆಯದಲ್ಲೇ ಕೆಎಎಸ್ ತೇರ್ಗಡೆಯಾಗಿ ತಹಶೀಲ್ದಾರ್, ಸಹಾಯಕ ಆಯುಕ್ತ, ಮಹಾನಗರ ಪಾಲಿಕೆ ಆಯುಕ್ತ, ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ ಯೋಜನೆಯ ಜಂಟಿ ಯೋಜನಾ ನಿರ್ದೇಶಕರಾಗಿ, ಜಿಲ್ಲಾಧಿಕಾರಿಯ ಸ್ಥಾನೀಯ ಸಹಾಯಕ ಹೀಗೆ ಹಲವು ಹುದ್ದೆಗಳಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ರಂಗ ಪ್ರವೇಶಿಸಿದ್ದರು.
ಇನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉದ್ಯಮಿ ಅಶೋಕ್ ಕುಮಾರ್ ರೈ ಅವರಿಗೆ ಟಿಕೆಟ್ ನೀಡಲಾಗಿದ್ದು, ಇವ್ರು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಆಪ್ತರಾಗಿ ಗುರುತಿಸಿಕೊಂಡಿದ್ದು, ಬಿಜೆಪಿಯಲ್ಲಿದ್ದರು. ಇತ್ತೀಚೆಗಷ್ಟೇ ಅವರು ಕಾಂಗ್ರೆಸ್ ಗೆ ಪಕ್ಷಾಂತರಗೊಂಡಿದ್ದರು. ಪುತ್ತೂರು ತಾಲೂಕಿನ ಕೋಡಿಂಬಾಡಿ ನಿವಾಸಿಯಾಗಿರುವ ಇವರು ಉದ್ಯಮಿಯಾಗಿದ್ದು, ರೈ ಎಸ್ಟೇಟ್ ಮಾಲಕರಾಗಿದ್ದಾರೆ.
ರೈ ಎಸ್ಟೇಟ್ ಮತ್ತು ಚಾರಿಟೇಬಲ್ ಟ್ರಸ್ಟ್ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು, ಮುಖ್ಯವಾಗಿ ಮನೆ, ರಸ್ತೆ, ಸ್ವ ಉದ್ಯೋಗ ಇನ್ನಿತರ ನಿರ್ಮಾಣ ಕಾರ್ಯ ಗಳಿಗೆ ನೆರವು ನೀಡುತ್ತಾ ಬಂದವರು. ಕೋಡಿಂಬಾಡಿ ಮಠಂತಬೆಟ್ಟು ಮಹಿಷಮರ್ದಿನಿ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಅವರ ನೇತೃತ್ವದಲ್ಲಿ ನಡೆದಿದೆ.
ಕಂಬಳ ಪ್ರಿಯರಾಗಿರುವ ಅಶೋಕ್ ಕುಮಾರ್ ರೈ, ತನ್ನ ನೇತೃತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ವಿಜಯ-ವಿಕ್ರಮ ಜೋಡುಕರೆ ಕಂಬಳ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw