ನಾಮಿನೇಷನ್ ಭರಾಟೆ: ಚಾಮರಾಜನಗರದಲ್ಲಿ ಇವರೆಲ್ಲಾ ಸಲ್ಲಿಸಿದ್ರು ಉಮೇದುವಾರಿಕೆ | ಕೊಳ್ಳೇಗಾಲದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕಣಕ್ಕೆ

ಚಾಮರಾಜನಗರ: ರೋಡ್ ಶೋ ಮೂಲಕ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವ ಮೂಲಕ ಚಾಮರಾಜನಗರ ಜಿಲ್ಲೆಯಲ್ಲಿ ನಾಮಿನೇಷನ್ ನಲ್ಲೇ ಹುರಿಯಾಳುಗಳು ಬಲ ಪ್ರದರ್ಶನ ಮಾಡಿದರು.
ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ, ನಾಲ್ಕನೇ ಗೆಲುವಿಗಾಗಿ ಕಾಯುತ್ತಿತುವ ಸಿ.ಪುಟ್ಟರಂಗಶೆಟ್ಟಿ ಶೆಟ್ಟಿ ಚಾಮರಾಜೇಶ್ವರ, ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ 10 ಸಾವಿರದಷ್ಟು ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದರು.
ಇನ್ನು, ಕೊಳ್ಳೇಗಾಲದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಪಾದಯಾತ್ರೆ ನಡೆಸಿ ಮಂಗಳವಾದ್ಯಗಳ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಿನೇಷನ್ ಫೈಲ್ ಮಾಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಕೂಡ ನಾಮಪತ್ರ ಸಲ್ಲಿಕೆ ವೇಳೆ ಬಲ ಪ್ರದರ್ಶನ ಮಾಡಿದ್ದು ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಹನೂರಿನಲ್ಲಿ ಹಾಲಿ ಕಾಂಗ್ರೆಸ್ ಶಾಸಕ ನರೇಂದ್ರ ಪುತ್ರ ನವನೀತ್ ಗೌಡ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ, ಬಿಜೆಪಿ ಹುರಿಯಾಳು ಪ್ರೀತನ್ ಗೌಡ, ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಕೂಡ ಬಲ ಪ್ರದರ್ಶನ ಮಾಡಿ ನಾಮಪತ್ರ ಸಲ್ಲಿಸಿದ್ದು ಹನೂರಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕೊಳ್ಳೇಗಾಲದಲ್ಲಿ ಬಂಡಾಯ ಅಭ್ಯರ್ಥಿ ಕಣಕ್ಕೆ:
ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಿನಕಹಳ್ಳಿ ರಾಚಯ್ಯ ಇಂದು ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಹೊಂದಿರುವ ರಾಚಯ್ಯ ಬಂಡಾಯ ಎದ್ದಿರುವುದು ಬಿಜೆಪಿಗೆ ಬಿಸಿತುಪ್ಪವಾಗಲಿದೆ.
ಉಳಿದಂತೆ, ಚಾಮರಾಜನಗರ ಬಿಎಸ್ಪಿ ಅಭ್ಯರ್ಥಿಯಾಗಿ ಹ.ರಾ.ಮಹೇಶ್, ಕರ್ನಾಟಕ ಪ್ರಜಾ ಪಾರ್ಟಿ ಅಭ್ಯರ್ಥಿಯಾಗಿ ಪ್ರಸನ್ನಕುಮಾರ್ ನಾಮಿನೇಷನ್ ಫೈಲ್ ಮಾಡಿದ್ದಾರೆ.
ಉಮೇದುವಾರಿಕೆ ಸಲ್ಲಿಕೆ ವೇಳೆಯೇ ಅಭ್ಯರ್ಥಿಗಳು ಧೂಳೆಬ್ಬಿಸುತ್ತಿದ್ದು ಸಾವಿರಾರು ಮಂದಿ ಬೆಂಬಲಿಗರ ಜೊತೆ ರೋಡ್ ಶೋ, ಪಾದಯಾತ್ರೆ ನಡೆಸಿ ನಾಮಿನೇಷನ್ ಸಲ್ಲಿಸುತ್ತಿದ್ದು ಚುನಾವಣಾ ಈಗ ನಿಜವಾದ ರಂಗು ಪಡೆದುಕೊಂಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw