ನೂತನ ಸ್ಪೀಕರ್ ಆಗಿ ಯು.ಟಿ.ಖಾದರ್ ಆಯ್ಕೆ | ಸಿದ್ದರಾಮಯ್ಯ, ಬೊಮ್ಮಾಯಿ ಸಹಿತ ಸದನ ಸದಸ್ಯರಿಂದ ಅಭಿನಂದನೆ

ನೂತನ ಸ್ಪೀಕರ್ ಆಗಿ ಯು.ಟಿ.ಖಾದರ್ ಆಯ್ಕೆಯಾಗಿದ್ದು, ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸದನದ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯು.ಟಿ.ಖಾದರ್ ಗೆ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಯು.ಟಿ.ಖಾದರ್ ಉತ್ತಮ ಕೆಲಸ ಮಾಡಿದ್ದಾರೆ. ವಿಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ನಾಡಿನ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಹಿತರಕ್ಷಣೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದುದು. ರಾಜ್ಯದ ಜಿಡಿಪಿ ಬೆಳವಣಿಗೆ ಕೂಡ ಆಗಬೇಕು ಎಂದು ಸಿದ್ದರಾಮಯ್ಯ ಈ ವೇಳೆ ತಿಳಿಸಿದರು.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇ ಆದ ಇತಿಹಾಸವಿದೆ. ಇಡೀ ದೇಶಕ್ಕೆ ಮಾರ್ಗದರ್ಶನ ನೀಡಿದ ವಿಧಾನಮಂಡಲವಿದು. ಯು.ಟಿ.ಖಾದರ್ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಯು.ಟಿ.ಖಾದರ್ ವಿಪಕ್ಷ ಉಪನಾಯಕರಾಗಿಯೂ ಉತ್ತಮ ಕೆಲಸ ಮಾಡಿದ್ದಾರೆ. ಈ ಹಿಂದೆ ಸ್ಪೀಕರ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್ ಸ್ಥಾನ. ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ವಿಪಕ್ಷ ಸದಸ್ಯರ ಹೇಳಿಕೆಗೆ ಸ್ಪೀಕರ್ ಹೆಚ್ಚು ಅವಕಾಶ ಕೊಡಬೇಕು. ಚರ್ಚೆ ವೇಳೆ ಕೊನೆಯ ಸಾಲಿನವರಿಗೆ ಹೆಚ್ಚು ಅವಕಾಶ ಕೊಡಬೇಕು. ಸ್ಪೀಕರ್ ಹೊಸ ವಿಚಾರಕ್ಕೆ ಅವಕಾಶ ಮಾಡಿಕೊಡುವ ವಿಶ್ವಾಸವಿದೆ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ ಎಂದರು.
ಕರ್ನಾಟಕದ ವಿಧಾನ ಮಂಡಲ ತನ್ನದೇ ಆದ ಘನತೆ ಹೊಂದಿದೆ. ಇಂತಹ ಮಹತ್ವದ ಸದನದ ಸಭಾಧ್ಯಕ್ಷರಾಗಿ ನೀವು ಆಯ್ಕೆಯಾಗಿರುವುದಕ್ಕೆ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ. ನಿಮಗೆ ಇಪ್ಪತ್ತು ವರ್ಷದ ಅನುಭವ ಇದೆ. ನೀವು ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುವಾಗ ಯಾವತ್ತೂ ಸಂಯಮ ಕಳೆದುಕೊಳ್ಳದೆ ಕೆಲಸ ಮಾಡಿದ್ದೀರಿ ಎಂದರು.
ವಿರೋಧ ಪಕ್ಷದ ಉಪ ನಾಯಕರಾಗಿಯೂ ಸಮರ್ಥವಾಗಿ ಕೆಲಸ ಮಾಡಿದ್ದೀರಿ. ಈ ಹಿಂದೆ ಈ ಹುದ್ದೆ ಅಲಂಕರಿಸಿದವರು ಈ ಹುದ್ದೆಯ ಗೌರವ ಹೆಚ್ಚಿಸಿದ್ದಾರೆ.ನೀವು ಕೊಡುವ ತೀರ್ಪು ಇಡೀ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ತಕ್ಕಡಿ ಸಮವಾಗಿರಬೇಕು ಎಂದರು.
ಸಂವಿಧಾನದಲ್ಲಿ ವಿಶೇಷ ಸ್ಥಾನ ಸಭಾಪತಿಗಳಿಗೆ ಇದೆ. ಸರ್ಕಾರದ ಅಳಿವು ಉಳಿವಿನ ತೀರ್ಮಾನ ಆಗಿದೆ. ಕೆಲವು ತೀರ್ಪುಗಳು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು ಇವೆ. ತಾವು ನೀಡುವ ತೀರ್ಪು ಲ್ಯಾಂಡ್ ಮಾರ್ಕ್ ಆಗುತ್ತದೆ. ನೀವು ನಿಷ್ಪಕ್ಷಪಾತವಾಗಿ ನೀವು ಕೆಲಸ ಮಾಡಿ. ಪ್ರತಿಪಕ್ಷದಲ್ಲಿ ನಿಮ್ಮ ಸ್ನೇಹಿತರು ಹೆಚ್ಚಿದ್ದಾರೆ. ಆಡಳಿತ ಪಕ್ಷದಲ್ಲಿ ನಿಮ್ಮ ನಿಕಟ ಪೂರ್ವ ಪಕ್ಷದ ಆತ್ಮೀಯರು ಇದ್ದಾರೆ. ಇಬ್ಬರನ್ನೂ ಸಮನಾವಾಗಿ ನೋಡಿ ಎಂದು ಸಲಹೆ ನೀಡಿದರು.
ಒಂದು ಗಾದೆ ಮಾತಿದೆ. ಅಪೋಜಿಷನ್ ಹ್ಯಾಸ್ ವೇ, ಗೌರ್ನಮೆಂಟ್ ಹ್ಯಾಸ್ ವೇ. ಹೀಗಾಗಿ ಪ್ರತಿಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಬಾರಿ ಹೊಸ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಅವರಿಗೆ ಮಾತನಾಡಲು ಹೆಚ್ಚಿನ ಅವಕಾಶ ನೀಡಿ ಹೊಸ ವಿಚಾರಗಳು ಹೊರಬರಲಿ ಎಂದರು.
ನೀವು ಪ್ರಗತಿಪರರಿದ್ದೀರಿ, ನಿಮ್ಮ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸ ಮಾಡಿದ್ದೀರಿ. ರಾಜ್ಯದ ವಿಚಾರದಲ್ಲಿಯೂ ನೀವು ಎಲ್ಲ ಸಮುದಾಯಗಳನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ. ಆ ಕೆಲಸವನ್ನು ನೀವು ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw