ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ, ಡಾ.ಹೆರ್ಮನ್ ಮ್ಯೋಗ್ಲಿಂಗ್ ಸ್ಮರಣೆ

ಕನ್ನಡ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರದ ನೆನಪಿನಲ್ಲಿ ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಈ ಪತ್ರಿಕೆ ಹಾಗೂ ಅದರ ಸಂಪಾದಕ ಡಾ.ಹರ್ಮನ್ ಮ್ಯೋಗ್ಲಿಂಗ್ ಅವರ ಚರಿತ್ರೆಯನ್ನು ಜನತೆಯ ಮುಂದಿಡುವ ಕೆಲಸ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಹೇಳಿದರು.
ಮಂಗಳೂರು ಬಲ್ಮಠ ಥಿಯೋಲಾಜಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಹಾಗೂ ಡಾ.ಹೆರ್ಮನ್ ಮ್ಯೋಗ್ಲಿಂಗ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
180 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ಸವಾಲುಗಳ ನಡುವೆ ಪತ್ರಿಕೆ ಆರಂಭಿಸಿದ ಹೆರ್ಮನ್ ಮ್ಯೋಗ್ಲಿಂಗ್ ಅವರ ಸಾಧನೆ , ಶಾಲೆಗಳನ್ನು ಆರಂಭಿಸಿದ ಅವರ ಸೇವಾ ಬದ್ಧತೆ ಸದಾ ಸ್ಮರಣೀಯ ಎಂದು ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಂ.ವಾಟ್ಸನ್ ಅವರು ಮಾತನಾಡಿ, ಕನ್ನಡದ ಮೊದಲ ಪತ್ರಿಕೆಯನ್ನು ಆರಂಭಿಸಿದ ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರಿನಲ್ಲಿ ಮಂಗಳೂರಿನಲ್ಲಿ ಯಾವುದೇ ಸ್ಮಾರಕಗಳು ಇಲ್ಲದೇ ಇರುವುದರಿಂದ ನಗರದ ರಸ್ತೆಯೊಂದಕ್ಕೆ ಹಾಗೂ ವೃತ್ತವೊಂದಕ್ಕೆ ಹೆರ್ಮನ್ ಮ್ಯೋಗ್ಲಿಂಗ್ ಅವರ ಹೆಸರು ಇರಿಸಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಈದಿನ ಡಾಟ್ ಕಾಮ್ ಸಂಯೋಜಕ ಹಾಗೂ ಸಾಮಾಜಿಕ ಕಾರ್ಯಕರ್ತ ಉಮರ್ ಯು.ಹೆಚ್ ಶುಭಕೋರಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಮಾತನಾಡಿ, ಮಂಗಳೂರು ಸಮಾಚಾರ ಪತ್ರಿಕೆ ಉದಯಿಸಿದ ಸ್ಥಳದಲ್ಲಿಯೇ ಮೊಗ್ಲಿಂಗ್ ಅವರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಯೂನಿಯನ್ ವತಿಯಿಂದ ಪ್ರತಿವರ್ಷ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಜರ್ನಲಿಸ್ಟ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ವಂದಿಸಿದರು. ಯೂನಿಯನ್ ಪದಾಧಿಕಾರಿಗಳಾದ ಈಶ್ವರ್ ವಾರಾಣಸಿ, ಗಿರಿಧರ್ ಶೆಟ್ಟಿ , ಹಮೀದ್ ವಿಟ್ಲ ಭಾಗವಹಿಸಿದ್ದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಶುಭೋದಯ ಆಳ್ವ, ಯೋಗೀಶ್ , ಶಾಂತಲಾ ಗಟ್ಟಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw