ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರಾ? | ಖಾತೆ ಬದಲಾವಣೆ ಹಿನ್ನೆಲೆ ಸ್ಪಷ್ಟನೆ ನೀಡಿದ ಆನಂದ್ ಸಿಂಗ್
ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಮತ್ತೆ ಖಾತೆ ಬದಲಾವಣೆ ಮಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ತಮ್ಮ ಖಾತೆ ಬದಲಾವಣೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ನಾನು ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ಕೆಲವು ಬೇಡಿಕೆಗಳನ್ನಿಟ್ಟಿದ್ದೆ. ಆ ಬೇಡಿಕೆಗಳನ್ನು ಯಡಿಯೂರಪ್ಪನವರು ಈಡೇರಿಸಿದ್ದಾರೆ. ಇನ್ನು ಕೆಲವು ಬೇಡಿಕೆ ಈಡೇರಿಲ್ಲ. ನನಗೆ ಖಾತೆ ಬದಲಾವಣೆಯ ಬಗ್ಗೆ ಯಾವುದೇ ಬೇಸರವಿಲ್ಲ. ನನಗೆ ಸಚಿವ ಸ್ಥಾನ ನೀಡಿರುವುದಕ್ಕೆ ಸಂತಸವಿದೆ ಎಂದು ಹೇಳಿದರು.
ಸಚಿವ ಆನಂದ್ ಸಿಂಗ್ ಗೆ ನೀಡಲಾಗಿದ್ದ ಪರಿಸರ ಖಾತೆಯನ್ನು ಬದಲಾವಣೆ ಮಾಡಿ ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಇದೀಗ ಮತ್ತೆ ಮೂಲಸೌಕರ್ಯ ಖಾತೆ ಹಾಗೂ ಜೆಸಿ ಮಾಧುಸ್ವಾಮಿಗೆ ನೀಡಲಾಗಿದ್ದ ಹಜ್ ಮತ್ತು ವಕ್ಫ್ ಖಾತೆ ನೀಡಿದ್ದರು. ಇದರಿಂದ ಬೇಸರಗೊಂಡು ಆನಂದ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಯ ಬೆನ್ನಲ್ಲೇ ಆನಂದ್ ಸಿಂಗ್ ಈ ಸ್ಪಷ್ಟನೆ ನೀಡಿದ್ದಾರೆ.



























