ಅತ್ತ ಹುಲಿ ಇತ್ತ ಚಿರತೆ, ಕಾಡುಕೋಣ ನಡುವೆ ವಿದ್ಯುತ್ ದೀಪವಿಲ್ಲದ ಮರಣ ದಾರಿ: ರೆಂಜಾಳ ಗ್ರಾಮಸ್ಥರ ದುರ್ಗತಿ ಕೇಳೋರು ಯಾರು? - Mahanayaka

ಅತ್ತ ಹುಲಿ ಇತ್ತ ಚಿರತೆ, ಕಾಡುಕೋಣ ನಡುವೆ ವಿದ್ಯುತ್ ದೀಪವಿಲ್ಲದ ಮರಣ ದಾರಿ: ರೆಂಜಾಳ ಗ್ರಾಮಸ್ಥರ ದುರ್ಗತಿ ಕೇಳೋರು ಯಾರು?

renjala news
28/07/2023


Provided by

ಕಾರ್ಕಳ: ಅತ್ತ ಹುಲಿ ಇತ್ತ ಚಿರತೆ, ಕಾಡುಕೋಣ ಕಾಡಿನ ನಡುವಿನ ದಾರಿಯಲ್ಲಿ  ವಿದ್ಯುತ್ ದೀಪವೂ ಇಲ್ಲ, ರಾತ್ರಿ ವೇಳೆ ಈ ದಾರಿಯಲ್ಲಿ ಸಾಗುವಾಗಿ ನಾವೆಲ್ಲೋ ಮರಣ ದಾರಿಯಲ್ಲಿ ಸಾಗುತ್ತಿದ್ದೇವೆಯೇ ಎಂದು ಭೀತಿಯಲ್ಲಿ ಸಂಚರಿಸುವ ಸ್ಥಿತಿ ಇಲ್ಲಿನ ನಾಗರಿಕರದ್ದಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ, ಗೋಳಿದಡಿ, ಕಕ್ಕೆರೆಗುಡ್ಡ ಹಾಗೂ ಹಾರಿಹಿತ್ಲು ವ್ಯಾಪ್ತಿಯ ಸಾರ್ವಜನಿಕರ ದಿನನಿತ್ಯದ ಪಾಡು ಇದಾಗಿದೆ. ಈಗಾಗಲೇ ಈ ಭಾಗದಲ್ಲಿ ಹುಲಿ ಹಾಗೂ ಚಿರತೆ ಇದೆ ಎಂದು ಇಲ್ಲಿನ ಜನತೆ ಹೇಳುತ್ತಿದ್ದಾರೆ. ಕೆಲವರಂತೂ ನಾವು ಹುಲಿಯನ್ನು ನೋಡಿದ್ದೇವೆ ಎಂದು ಹೇಳುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲಿರೋದು ಚಿರತೆ ಅಂತ ಹೇಳುತ್ತಿದ್ದಾರೆ ಮತ್ತು ಈಗಾಗಲೇ ಒಂದು ಬೋನು ಇಟ್ಟು ಸ್ಥಳದಿಂದ ತೆರಳಿದ್ದಾರೆ.

ಮೊದಲೇ ಹುಲಿ ಚಿರತೆಗಳ ಭಯದಲ್ಲಿ ತತ್ತರಿಸಿರುವ ಈ ಪ್ರದೇಶದಲ್ಲಿ ಒಂದು ಬೀದಿ ದೀಪ ಅಳವಡಿಸಲು ಕೂಡ ಇಲ್ಲಿನ ಪಂಚಾಯತ್ ಮುಂದಾಗಿಲ್ಲ. ದೇವರಗುಡ್ಡೆ ಮಾರ್ಗವು ಬಜಗೋಳಿ, ಮಿಯ್ಯಾರು ರಾಷ್ಟ್ರಿಯ ಹೆದ್ದಾರಿಯನ್ನು ಸಂಪರ್ಕಿಸುವ ಒಳ ರಸ್ತೆಯಾಗಿದೆ. ತೀರಾ ಹಳ್ಳಿ ಪ್ರದೇಶವಾಗಿರುವ ಈ ಭಾಗದಲ್ಲಿ ಹಲವು ಮನೆಗಳಲ್ಲಿ ಕಳವು ಪ್ರಕರಣಗಳು ಕೂಡ ನಡೆದಿವೆ. ಈ ಭಾಗದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ದಲಿತ ಸಮುದಾಯದ ಕುಟುಂಬಗಳು ವಾಸಿಸುತ್ತಿದ್ದಾರೆ.

ರಸ್ತೆಗೆ ಬೀದಿ ದೀಪದ ವ್ಯವಸ್ಥೆ ಮಾಡುವಂತೆ ಇಲ್ಲಿನ ಜನತೆ ರೆಂಜಾಳ ಗ್ರಾಮ ಪಂಚಾಯತ್ ಗೆ ಮನವಿ ಮಾಡಿದ್ದರೂ, ಪಂಚಾಯತ್ ಈ ಬಗ್ಗೆ ನಿರ್ಲಕ್ಷ್ಯವಹಿಸಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರಾಗಲಿ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತಿದ್ದಾರೆ. ಮಾಜಿ ಇಂಧನ ಸಚಿವ ಹಾಲಿ ಶಾಸಕರಾದ ಸುನೀಲ್ ಕುಮಾರ್ ಅವರ ಕ್ಷೇತ್ರದಲ್ಲಿಯೇ ಇಂತಹ ಸಮಸ್ಯೆ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ರೆಂಜಾಳ ಗ್ರಾಮ ಪಂಚಾಯತ್ ಗೆ ದೇವರಗುಡ್ಡೆ, ಗೋಳಿದ ಡಿ, ಕಕ್ಕೆರೆಗುಡ್ಡ ಹಾಗೂ ಹಾರಿಹಿತ್ಲು ಭಾಗದ ಜನರು ಮಾಡಿದ ದ್ರೋಹ ಏನು ಎಂದು ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ. ಈ ಭಾಗದಲ್ಲಿ ಬೀದಿ ದೀಪವಿಲ್ಲದೇ ಜನರು ರಾತ್ರಿ ವೇಳೆ ಸಂಚರಿಸಲು ಭಯಪಡುತ್ತಿದ್ದಾರೆ.  ತಕ್ಷಣವೇ ಪಂಚಾಯತ್ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ