ಮಂಗಳೂರು: ಆಗಸ್ಟ್ 20ರಂದು ‘ಸೌಜನ್ಯಳ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನೆ’

ಸೌಜನ್ಯ ಹೋರಾಟ ಸಮಿತಿ ಮಂಗಳೂರು ಇದರ ನೇತೃತ್ವದಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಂಚಾಲಕಿ ಪ್ರಸನ್ನ ರವಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಧರ್ಮಸ್ಥಳ ನಿವಾಸಿ ಸೌಜನ್ಯ ಎಂಬ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಕೃತ್ಯ ನಡೆದು 11 ವರ್ಷಗಳು ಕಳೆದ್ರೂ ಇದರ ಹಿಂದಿರುವ ನೈಜ ಅತ್ಯಾಚಾರಿಗಳನ್ನು ಕಂಡು ಹಿಡಿಯಲು ಇದುವರೆಗೂ ನಮ್ಮ ಕಾನೂನು ವ್ಯವಸ್ಥೆಗೆ ಸಾಧ್ಯವಾಗಲಿಲ್ಲ. ಹೀಗಾಗಿ ಮತ್ತೊಮ್ಮೆ ಈ ಪ್ರಕರಣದ ಬಗ್ಗೆ ನ್ಯಾಯಾಂಗ ಮರುತನಿಖೆ ಮಾಡಿ ಸೌಜನ್ಯಳಿಗೆ ನ್ಯಾಯ ದೊರಕಿಸಿ ಕೊಡಲು ಒತ್ತಾಯಿಸುವುದು ಈ ಸಭೆಯ ಉದ್ದೇಶವಾಗಿದೆ ಎಂದರು.
ಆಗಸ್ಟ್ 20 ರ ಆದಿತ್ಯವಾರ ಸಂಜೆ 3:30 ಗಂಟೆಗೆ ಸರಿಯಾಗಿ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಕದ್ರಿ ಬಯಲು ರಂಗ ಮಂದಿರದವರೆಗೆ ಪಾದಯಾತ್ರೆಯ ಮೂಲಕ ಹೊರಟು ಪ್ರತಿಭಟನಾ ಸಭೆ ನಡೆಯಲಿರುವುದು. ಸಭೆಯನ್ನುದ್ದೇಶಿಸಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಲಿದ್ದಾರೆ. ಸಭೆಯ ನೇತೃತ್ವವನ್ನು ಪ್ರಸನ್ನ ರವಿ ವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ಹೋರಾಟ ಸಮಿತಿಯ ಸದಸ್ಯರಾದ ಶಶಿಕಲಾ ಶೆಟ್ಟಿ, ಸಾಜನ್ ಶೆಟ್ಟಿ, ವಿಖ್ಯಾತ್ ಉಳ್ಳಾಲ್ ಉಪಸ್ಥಿತರಿದ್ದರು.