ಬಂಡೀಪುರದಲ್ಲಿ ಮನೆ ಕಟ್ಟುವ ಸಂಬಂಧ ಹೈಕೋರ್ಟ್ ಕದ ತಟ್ಟಿದ ಗೋಲ್ಡನ್ ಸ್ಟಾರ್ ಗಣೇಶ್! ಮನವಿ ತಿರಸ್ಕೃತ

ಚಾಮರಾಜನಗರ: ಪರಿಸರ ಸೂಕ್ಷ್ಮ ವಲಯದಲ್ಲಿ ಮನೆ ಕಟ್ಟುವ ವಿಚಾರದಲ್ಲಿ ವಿವಾದ ಮಾಡಿಕೊಂಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಈಗ ಹೈಕೋರ್ಟ್ ಕದ ತಟ್ಟಿದ್ದಾರೆ.
ಪರಿಸರ ಸೂಕ್ಷ್ಮ ವಲಯದಲ್ಲಿ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಅನುಮತಿ ಪಡೆದು ಬೃಹತ್ ಕಟ್ಟಡ ಕಾಮಗಾರಿ ನಡೆಸುತ್ತಿರುವ ಆರೋಪಕ್ಕೆ ಗಣೇಶ್ ಗುರಿಯಾಗಿ ಅರಣ್ಯ ಇಲಾಖೆ ನೋಟಿಸ್ ಕೊಟ್ಟಿತ್ತು. ಈಗ ಗಣೇಶ್, ಮನೆ ನಿರ್ಮಾಣಕ್ಕೆ ಹೈ ಕದ ತಟ್ಟಿದ್ದು ನ್ಯಾಯಾಲಯವು ಗಣೇಶ್ ಮನವಿ ತಿರಸ್ಕರಿಸಿ ಪರಿಸರ ಸೂಕ್ಷ ವಲಯ ನಿರ್ವಹಣಾ ಸಮಿತಿ ಬಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ನಿರ್ದೇಶಿಸಿದೆ.
ಏನಿದು ಮನೆ ವಿವಾದ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಡುವ ಜಕ್ಕಹಳ್ಳಿ ಗ್ರಾಮದ ಸರ್ವೇ ನಂ. 105ರಲ್ಲಿ 1.24 ಎಕರೆ ಜಮೀನು ಖರೀದಿಸಿರುವ ನಟ ಗಣೇಶ್ ಸ್ವಂತ ವಾಸಕ್ಕೆ ಮನೆ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಕುರಿತು ಅನುಮತಿ ಕೇಳಿದ್ದರು.
ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿರುವ ಬಂಡೀಪುರ ಪರಿಸರ ಸೂಕ್ಷ್ಮ ವಲಯ ನಿರ್ವಹಣಾ ಸಮಿತಿಯು ತಾತ್ಕಾಲಿಕ ವಾಸದ ಮನೆಗೆ ಅನುಮತಿಯನ್ನು ಕೊಟ್ಟಿತ್ತು. ಆದರೆ, ಜೆಸಿಬಿ ಮೂಲಕ ದೊಡ್ಡ ಮಟ್ಟದ ಕೆಲಸ ನಡೆಯುತ್ತಿದ್ದರಿಂದ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ತಾತ್ಕಾಲಿಕ ಮನೆಗೆ ಅನುಮತಿ ಪಡೆದು ಬೃಹತ್ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಮುಚ್ಚಳಿಕೆ ಪತ್ರ, ಕಂದಾಯ ದಾಖಲಾತಿ ಸೇರಿದಂತೆ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಏಳು ದಿನಗಳ ಒಳಗೆ ಸಲ್ಲಿಸುವಂತೆ ಕಳೆದ 14 ರಂದು ಸೂಚಿಸಿದ್ದರು. ಅಲ್ಲಿವರೆಗೆ ಕೆಲಸ ನಿಲ್ಲಿಸುವಂತೆಯೂ ಹೇಳಿದ್ದರು.