ಸರಣಿ ಕಳ್ಳರನ್ನು ಬಂಧಿಸಿ, ಬಿನ್ನಿಪೇಟೆಯ ನಿವಾಸಿಗಳಿಗೆ ರಕ್ಷಣೆ ನೀಡಿ: ಎಎಪಿ ಆಗ್ರಹ

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಬಿನ್ನಿಪೇಟೆಯಲ್ಲಿ ಹಾಡುಹಗಲೇ ಸರಣಿ ಕಳ್ಳತನ ಮಾಡುತ್ತಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಮತ್ತೆಂದೂ ಕಳ್ಳತನವಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದ್ದಾರೆ
ಸ್ಥಳಕ್ಕೆ ಭೇಟಿ ನೀಡಿದ ಮೋಹನ್ ದಾಸರಿ ನೇತೃತ್ವದ ಎಎಪಿ ತಂಡ ಜನರ ಸಮಸ್ಯೆಗಳನ್ನು ಆಲಿಸಿತು. ಬಳಿಕ ಸ್ಥಳೀಯ ನಿವಾಸಿಗಳ ಪರವಾಗಿ ಖುದ್ದಾಗಿ ಜೆಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು.
ತಿಂಗಳಿಗೆ ಕನಿಷ್ಠ 15 ಕಳ್ಳತನಗಳು ನಡೆಯುತ್ತಿವೆ. ಮೋಟಾರ್, ಬೈಕ್, ಸೈಕಲ್ ಸೇರಿದಂತೆ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗಲಾಗುತ್ತಿದೆ. ಮಹಿಳೆಯರು ಹಗಲು ಹೊತ್ತಲ್ಲಿ ಮನೆಯಲ್ಲಿರಲು ಭಯಪಡುವಂತಹ ವಾತಾವರಣ ಇಲ್ಲಿದೆ. ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದಾರೆ. ಇಲ್ಲಿನ ಶಾಸಕರಾಗಿ ಮಂತ್ರಿಯಾಗಿರುವ ದಿನೇಶ್ ಗುಂಡೂರಾವ್ ಅವರು ತಕ್ಷಣ ಗಮನಹರಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದರು.
ಸುಮಾರು 25 ವರ್ಷಗಳಿಂದ ಜನಪ್ರತಿನಿಧಿಯಾಗಿ ಇಲ್ಲಿಂದ ಆಯ್ಕೆಯಾಗುತ್ತಿದ್ದೀರಿ. ಮಂತ್ರಿಗಳಾಗಿದ್ದೀರಿ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದೀರಿ. ಆದರೆ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಡುಹಗಲೇ ನಡೆಯುತ್ತಿರುವ ಸರಣಿ ಕಳ್ಳತನದ ಬಗ್ಗೆ ಇದುವರೆಗೆ ಗಮನ ಹರಿಸಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಪೊಲೀಸರು ಅನಿವಾರ್ಯವಾಗಿ ಖಾಸಗಿ ಸಿಸಿಟಿವಿಗಳ ಮೊರೆ ಹೋಗಬೇಕಿದೆ. ತಮ್ಮ ಕ್ಷೇತ್ರದ ಜನತೆಯ ಬಗ್ಗೆ ಯಾಕೆ ಇಷ್ಟೋಂದು ನಿರ್ಲಕ್ಷ್ಯ ತೋರುತ್ತಿದ್ದೀರಿ ಎಂದು ದಿನೇಶ್ ಗುಂಡೂರಾವ್ ವಿರುದ್ಧ ಮೋಹನ್ ದಾಸರಿ ಹರಿಹಾಯ್ದರು.
ಜನ ಸಂಪರ್ಕ ಕೇಂದ್ರಕ್ಕೆ ವಿಷಯ ತಿಳಿಸಿ:
ಸ್ಥಳೀಯರು ಜಾಗೃತರಾಗಬೇಕು. ಯಾವುದೇ ಕಳ್ಳತನ ನಡೆದರೂ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಬೇಕು. ಭಯಪಟ್ಟುಕೊಂಡು ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮ ಪಕ್ಷದ ಮುಖಂಡರಾದ ಪುಷ್ಪ ಕೇಶವ್ ಅವರ ಜನ ಸಂಪರ್ಕ ಕೇಂದ್ರವಿದೆ. ಅಲ್ಲಿಗೆ ನಿಮ್ಮ ಸಮಸ್ಯೆಗಳನ್ನು ತಿಳಿಸಿ. ನಾವು ನಿಮ್ಮ ಪರವಾಗಿ ನಿಲ್ಲುತ್ತೇವೆ ಎಂದು ಮೋಹನ್ ದಾಸರಿ ಸ್ಥಳೀಯರಿಗೆ ಅಭಯ ನೀಡಿದರು.
ಇದೇ ವೇಳೆ ಸ್ಥಳೀಯರು ಸಮರ್ಪಕ ಸಿಸಿಟಿವಿ, ಬೀದಿದೀಪಗಳನ್ನು ಅಳವಡಿಸಬೇಕು. ಕಳ್ಳರಿಂದ ರಕ್ಷಣೆ ನೀಡಬೇಕು ಎಂದು ಕೋರಿದರು.ಎಎಪಿ ತಂಡದಲ್ಲಿ ಪುಷ್ಪ ಕೇಶವ್ ಸೇರಿದಂತೆ ಇನ್ನಿತರ ಮುಖಂಡರಿದ್ದರು.