ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದ ಶಿಕ್ಷಕಿ: ವಿಡಿಯೋ ವೈರಲ್ - Mahanayaka
11:18 PM Friday 19 - December 2025

ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದ ಶಿಕ್ಷಕಿ: ವಿಡಿಯೋ ವೈರಲ್

26/08/2023

ಮುಸ್ಲಿಂ ಸಮುದಾಯದ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ಶಾಲಾ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿರುವ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ.

ಮುಝಫರ್ ನಗರದ ಮನ್ಸೂರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆಯ 2 ನೇ ತರಗತಿಯ ವಿದ್ಯಾರ್ಥಿಗಳಿಗೆ ತೃಪ್ತಿ ತ್ಯಾಗಿ ಎಂಬ ಶಿಕ್ಷಕಿ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯಲು ಹೇಳುತ್ತಿರುವುದು ಬಯಲಾಗಿದೆ‌.

ಈ ಘಟನೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಫೀಸರ್ ರವಿಶಂಕರ್, “ವೈರಲ್ ವೀಡಿಯೊವನ್ನು ಪರಿಶೀಲಿಸಲಾಗಿದ್ದು, ಶಾಲಾ ಅಸೈನ್‌ಮೆಂಟನ್ನು ಪೂರ್ಣಗೊಳಿಸದ ಕಾರಣ ಮಗುವನ್ನು ಥಳಿಸಲಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ. ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ಸಹ ವೀಡಿಯೊದಲ್ಲಿ ಕೇಳಬಹುದು. ನಾವು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ ಮತ್ತು ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ವೀಡಿಯೊದಲ್ಲಿ ವಿದ್ಯಾರ್ಥಿಗಳಲ್ಲದೆ, ಇಬ್ಬರು ವ್ಯಕ್ತಿಗಳು ಸಹ ಕಾಣಿಸಿಕೊಂಡಿದ್ದಾರೆ. ಅವರಲ್ಲಿ ಒಬ್ಬರು ಶಿಕ್ಷಕರಾಗಿದ್ದಾರೆ. ಇನ್ನೊಬ್ಬ ವ್ಯಕ್ತಿಯ ಗುರುತು ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪ್ರಾಥಮಿಕ ಶಿಕ್ಷಾ ಅಧಿಕಾರಿ ಶುಭಂ ಶುಕ್ಲಾ ಹೇಳಿದ್ದಾರೆ. “ಇಬ್ಬರ ವಿರುದ್ಧ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ