ಕೆಂಗಣ್ಣು: ಮತ್ತೆ ಸೇವಾ ಕಾಯ್ದೆ ವಿರುದ್ಧ ದಿಲ್ಲಿ ಸಿಎಂ ಕೇಜ್ರಿವಾಲ್ ಆಕ್ರೋಶ

ಚುನಾಯಿತ ಸರ್ಕಾರದ ಆದೇಶಗಳ ವಿರುದ್ಧ ಬಹಿರಂಗವಾಗಿ ದಂಗೆ ಏಳಲು ದೆಹಲಿ ಸೇವೆಗಳ ಕಾಯ್ದೆಯು ಅಧಿಕಾರಿಗಳಿಗೆ ಪರವಾನಗಿ ನೀಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ. ಪ್ರಧಾನ ಕಾರ್ಯದರ್ಶಿ (ಹಣಕಾಸು) ಎಸಿ ವರ್ಮಾ ತನ್ನ ನಿರ್ದೇಶನವನ್ನು ಪಾಲಿಸಲು ನಿರಾಕರಿಸಿದ್ದಾರೆ ಎಂದು ದೆಹಲಿ ಸಚಿವೆ ಅತಿಶಿ ಆರೋಪಿಸಿದ ನಂತರ ಕೇಜ್ರಿವಾಲ್ ಅವರು ಈ ಹೇಳಿಕೆ ನೀಡಿದ್ದಾರೆ.
ಚುನಾಯಿತ ಸರ್ಕಾರದ ಲಿಖಿತ ಆದೇಶಗಳ ವಿರುದ್ಧ ಬಹಿರಂಗವಾಗಿ ದಂಗೆ ಏಳಲು ದೆಹಲಿ ಸೇವೆಗಳ ಕಾಯ್ದೆ ಅಧಿಕಾರಿಗಳಿಗೆ ಪರವಾನಗಿ ನೀಡುತ್ತದೆ. ಅಲ್ಲದೇ ಅಧಿಕಾರಿಗಳು ಚುನಾಯಿತ ಸಚಿವರ ಆದೇಶಗಳನ್ನು ಪಾಲಿಸಲು ನಿರಾಕರಿಸುವುದಕ್ಕೆ ಪ್ರಾರಂಭಿಸಿದ್ದಾರೆ.
ಯಾವುದೇ ರಾಜ್ಯ ಅಥವಾ ದೇಶ ಅಥವಾ ಸಂಸ್ಥೆ ಈ ರೀತಿ ನಡೆಯಲು ಸಾಧ್ಯವೇ? ಈ ಕಾಯ್ದೆಯು ದೆಹಲಿಯನ್ನು ಹಾಳು ಮಾಡುತ್ತದೆ ಮತ್ತು ಇದನ್ನೇ ಬಿಜೆಪಿ ಬಯಸುತ್ತದೆ. ಈ ಕಾಯ್ದೆಯನ್ನು ಆದಷ್ಟು ಬೇಗ ರದ್ದುಗೊಳಿಸಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸೇವೆಗಳ ಕಾಯ್ದೆಯು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತಿಶಿ, ಜಿಎಸ್ಟಿ ಮರುಪಾವತಿ ಪ್ರಕರಣದಲ್ಲಿ ದೆಹಲಿ ಸರ್ಕಾರದ ವಿರುದ್ಧದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ವಕೀಲರನ್ನು ನಿಯೋಜಿಸುವಂತೆ ಹಣಕಾಸು ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದೇನೆ ಎಂದು ಅವರು ಹೇಳಿದರು.