ಮುಂಬೈಗೆ ಬಂದ ದೀದಿ: ಬಚ್ಚನ್ ಕುಟುಂಬದ ಜತೆ ಚರ್ಚೆ; ಅಮಿತಾಭ್ ಗೆ ‘ಭಾರತ ರತ್ನ’ ಕೊಡಲು ಮಮತಾ ಬ್ಯಾನರ್ಜಿ ಆಗ್ರಹ

31/08/2023
ಎರಡು ದಿನಗಳ ಕಾಲ ನಡೆಯಲಿರುವ ವಿಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಮುಂಬೈಗೆ ಆಗಮಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಬಚ್ಚನ್ ಕುಟುಂಬವನ್ನು ಭೇಟಿ ಮಾಡಿದರು.
ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರನ್ನು ಬಚ್ಚನ್ ಮನೆಯಲ್ಲಿಯೇ ಭೇಟಿ ಮಾಡಿದ ಬಳಿಕ ಕೋಲ್ಕತ್ತಾಗೆ ಭೇಟಿ ನೀಡುವಂತೆ ಮಮತಾ ಅವರು ಆಹ್ವಾನ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ‘ಅಮಿತ್ ಜಿ ನಮ್ಮ ಭಾರತ ರತ್ನ. ಅವರು ಹಾಗೂ ಅವರ ಕುಟುಂಬ ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ’ ಎಂದು ಹೇಳಿದರು.
‘ಇಂದು ನಾನು ಅಮಿತ್ ಜಿಗೆ ರಾಖಿ ಕಟ್ಟಿದ್ದೇನೆ. ಇದು ನನ್ನ ಪಾಲಿಗೆ ವಿಶೇಷ ದಿನ” ಎಂದು ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದರು. ಅಮಿತಾಭ್ ಬಚ್ಚನ್ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರಿಗೆ ಭಾರತ ರತ್ನವನ್ನು ನೀಡಬೇಕೆಂದು ಮಮತಾ ಬ್ಯಾನರ್ಜಿ ಈ ಹಿಂದೆ ಕೂಡಾ ಆಗ್ರಹಿಸಿದ್ದರು.