ಬಾತ್ ರೂಮ್ ನಲ್ಲಿ ಕೂಡಿ ಹಾಕಿ ಬಾಲಕಿಗೆ ಕಿರುಕುಳ: ಖಾಸಗಿ ಭಾಗ ಸೇರಿದಂತೆ ವಿವಿಧೆಡೆ ಸುಟ್ಟಗಾಯ ಪತ್ತೆ

ಮಹಾರಾಷ್ಟ್ರ: ಹತ್ತು ವರ್ಷ ವಯಸ್ಸಿನ ಬಾಲಕಿಯನ್ನು ಐದು ದಿನಗಳ ಕಾಲ ಬಾತ್ ರೂಮ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಬೆಸಾ-ಪಿಪ್ಲಾ ರಸ್ತೆಯ ಅಥರ್ವ ನಗರಿ ಮನೆಯಲ್ಲಿ ವಾಸಿಸುತ್ತಿದ್ದ ದಂಪತಿಗಳು ಕೆಲಸಕ್ಕೆ ಕರೆ ತಂದಿದ್ದ ಬಾಲಕಿಯನ್ನು ಬಾತ್ ರೂಂನಲ್ಲಿ ಬೀಗ ಹಾಕಿ ಕೂಡಿ ಹಾಕಿದ್ದು, ಆಕೆಗೆ ತಿನ್ನಲು ಕೆಲವು ಬ್ರೆಡ್ ಪ್ಯಾಕೆಟ್ ಗಳನ್ನು ಇಟ್ಟು ತೆರಳಿದ್ದರು ಎಂದು ನಾಗ್ಪುರ ಡಿಸಿಪಿ ವಿಜಯಕಾಂತ್ ಸಾಗರ್ ತಿಳಿಸಿದ್ದಾರೆ.
ವಿದ್ಯುತ್ ಬಿಲ್ ಪಾವತಿಸದ ಕಾರಣ, ಇಂಧನ ಇಲಾಖೆ ನೌಕರರು ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಫ್ಲ್ಯಾಟ್ ಗೆ ಬಂದ ವೇಳೆ ಆ ಬಾಲಕಿ ಸಹಾಯಕ್ಕಾಗಿ ಕಿಟಕಿ ಮೂಲಕ ನೋಡುತ್ತಿರುವುದನ್ನು ಗಮನಿಸಿದ್ದಾರೆ. ಬಳಿಕ ನೆರೆಹೊರೆಯವರಿಗೆ ಮಾಹಿತಿ ನೀಡಿದ ಉದ್ಯೋಗಿಗಳು ಬೀಗ ಒಡೆದು ಬಾಲಕಿಯನ್ನು ರಕ್ಷಿಸಿದ್ದಾರೆ.
ಆರೋಪಿಯನ್ನು ತಹಾ ಅರ್ಮಾನ್ ಇಸ್ತಿಯಾಕ್ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದೆಡೆ, ಆರೋಪಿಯ ಪತ್ನಿ ಹಿನಾ ಮತ್ತು ಸೋದರ ಮಾವ ಅಜರ್ ಪರಾರಿಯಾಗಿದ್ದು, ಅವರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ನೊಂದ ಬಾಲಕಿಯ ದೇಹದ ಖಾಸಗಿ ಭಾಗಗಳು ಸೇರಿದಂತೆ ವಿವಿಧೆಡೆ ಸುಟ್ಟ ಗಾಯಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.