ಸೇಬು –ಮೂಸಂಬಿ ಹಣ್ಣಿನ ಒಳಗೆ ಗಾಂಜಾ ಇಟ್ಟು ಕೈದಿಗಳಿಗೆ ಸಪ್ಲೈ: ಮೂವರು ಆರೋಪಿಗಳ ಅರೆಸ್ಟ್

05/09/2023
ಹಾಸನ: ಸೇಬು ಹಾಗೂ ಮೂಸಂಬಿ ಹಣ್ಣಿನ ಒಳಗೆ ಗಾಂಜಾ ಇಟ್ಟು ಕೈದಿಗಳಿಗೆ ಪೂರೈಸುತ್ತಿದ್ದ ಮೂವರು ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ತಬ್ರೇಜ್(28), ವಾಸಿಂ(21) ಹಾಗೂ ರಕೀಬ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗೆ ಗಾಂಜಾ ಸಪ್ಲೈ ಮಾಡಲು ಸೇಬು ಹಾಗೂ ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾ ಸೊಪ್ಪನ್ನು ಇಟ್ಟು ಸ್ಟಿಕ್ಕರ್ ಅಂಟಿಸಿ ಜೈಲಿನ ಹಿಂಬದಿಯ ಕಾಂಪೌಂಡ್ ಒಳಗೆ ಎಸೆಯಲು ಹೊಂಚು ಹಾಕುತ್ತಿದ್ದ ವೇಳೆ ಹಾಸನ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು.
ಆರೋಪಿಗಳ ಬ್ಯಾಗ್ ನಲ್ಲಿ ಗಾಂಜಾ ತುಂಬಿದ್ದ 3 ಸೇಬು ಹಾಗೂ 2 ಮೂಸಂಬಿ ಹಣ್ಣು ಪತ್ತೆಯಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.