ಹಕ್ಕುಪತ್ರ ನೀಡಲು ತಹಶೀಲ್ದಾರ್ ಹಿಂದೇಟು: ಮಿನಿ ವಿಧಾನಸೌಧದ ಎದುರು ಗ್ರಾ.ಪಂ. ಉಪಾಧ್ಯಕ್ಷ ಮೌನ ಪ್ರತಿಭಟನೆ

ಮೂಡಿಗೆರೆ: ತಹಶೀಲ್ದಾರ್ ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕೊಟ್ಟಿಗೆಹಾರ ಮೂಡಿಗೆರೆ ತಾಲ್ಲೂಕಿನ ನಿಡುವಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಹಾವಳಿ ಮೂಡಿಗೆರೆ ಮಿನಿ ವಿಧಾನಸೌಧದ ಎದುರು ಏಕಾಂಗಿಯಾಗಿ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ.
ಎರಡು ವರ್ಷಗಳಿಂದ ನಿಡುವಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕಲ್ ನಿಡುವಳೆ ಗ್ರಾಮದ 70ಕ್ಕೂ ಹೆಚ್ಚು ಗ್ರಾಮಸ್ಥರು 94 ಸಿ ಯಲ್ಲಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 30 ಜನರು ಸರ್ಕಾರಕ್ಕೆ ಹಣವನ್ನು ಪಾವತಿ ಮಾಡಿದ್ದಾರೆ ಆದರೆ ಮೂಡಿಗೆರೆ ತಹಶೀಲ್ದಾರ್ ಅವರು ಹಕ್ಕುಪತ್ರ ನೀಡಲು ಹಿಂದೇಟು ಹಾಕುತ್ತಿದ್ದು, ಇದರಿಂದ ಬೇಸತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಹಾವಳಿಯವರು ಮೌನ ಪ್ರತಿಭಟನೆ ಆರಂಭಿಸಿದ್ದಾರೆ.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ನವೀನ್ ಹಾವಳಿ ಮಾತನಾಡಿ, ಈ ಭಾಗದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸ ಮಾಡುತ್ತಿದ್ದು 94 ಸಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಹಕ್ಕುಪತ್ರ ನೀಡದೆ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ. ಗ್ರಾಮಸ್ಥರು ಕಚೇರಿಗಳಿಗೆ ಅಲೆದು ಅಲೆದು ರೋಸಿ ಹೋಗಿದ್ದಾರೆ ಇದರಿಂದ ಖುದ್ದಾಗಿ ನಾನೇ ಬಂದರು ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಅದರಿಂದ ಬೇಸತ್ತು ಮೌನ ಪ್ರತಿಭಟನೆ ಮಾಡುತ್ತಿದ್ದೇನೆ ಎಂದರು.