ಇಂಡಿಯಾ ಇನ್ಮುಂದೆ ‘ಭಾರತ’ ಆಗುತ್ತಾ..? ಶೃಂಗಸಭೆ ಔತಣಕೂಟದ ಆಹ್ವಾನ ಪತ್ರಿಕೆಯಲ್ಲೇನಿದೆ..?

ಇಂಡಿಯಾ ಇನ್ಮುಂದೆ ಭಾರತ ಆಗುತ್ತಾ..? ಹೀಗೊಂದು ಪ್ರಶ್ನೆ ಮೂಡಿದೆ. ಹೌದು. ಇನ್ಮುಂದೆ ರಿಪಬ್ಲಿಕ್ ಆಫ್ ಇಂಡಿಯಾವನ್ನು ರಿಪಬ್ಲಿಕ್ ಆಫ್ ಭಾರತ್ ಎಂದು ಬದಲಾಯಿಸಲಾಗುತ್ತಾ ಎಂಬ ಚರ್ಚೆ ಜೋರಾಗಿ ನಡೆಯತೊಡಗಿದೆ. ಇದಕ್ಕೆ ಕಾರಣ ಕೂಡಾ ಇದೆ. ಅದೇನೆಂದರೆ, ಇದಕ್ಕೆ ಪುಷ್ಠಿ ನೀಡುವಂತೆ ರಾಷ್ಟ್ರಪತಿ ಭವನದಿಂದ ಜಿ 20 ಶೃಂಗಸಭೆ ಔತಣಕೂಟಕ್ಕೆ ಕಳುಹಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲು ‘ ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಬರೆಯಲಾಗಿದೆ.
ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಜಯರಾಮ್ ರಮೇಶ್ ಕೂಡ ಟ್ವೀಟ್ ಮಾಡಿದ್ದು ಹೆಸರು ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.
ಇನ್ನು ಸೆಪ್ಟೆಂಬರ್ 18 -22 ರಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ಬದಲಾವಣೆ ಮಾಡಲಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಯಾಕೆಂದರೆ ಇಲ್ಲಿಯವರೆಗೆ ವಿಶೇಷ ಅಧಿವೇಶನದ ಯಾವ ಕಾರಣಕ್ಕೆ ಕರೆಯಲಾಗಿದೆ ಎಂಬ ಮಾಹಿತಿ ನೀಡಿಲ್ಲ. ಈಗ ಈ ರೀತಿಯ ಬೆಳವಣಿಗೆ ಕೂಡ ನಡೆದಿದ್ದು ಅಧಿವೇಶನದ ಉದ್ದೇಶದ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದೆ.