ಹಿಂದೂ ಧರ್ಮದ ಹುಟ್ಟು ಬಗ್ಗೆ ಪರಮೇಶ್ವರ್ ಹೇಳಿಕೆಗೆ ಬಿ.ವೈ.ವಿಜಯೇಂದ್ರ ತಿರುಗೇಟು

ಬೆಂಗಳೂರು: ಬೇರೆ ಯಾರಿಗಾದರೂ ಹಿಂದೂ ಧರ್ಮದ ಹುಟ್ಟು ಬಗ್ಗೆ ಅನುಮಾನ ಬಂದರೆ ನಾನು ಏನೂ ಹೇಳುತ್ತಿರಲಿಲ್ಲ. ಆದರೆ ಪರಮೇಶ್ವರ್ ಅವರು ಹೇಳಿರುವುದನ್ನು ನಾನು ಒಪ್ಪುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.
ಹಿಂದೂ ಧರ್ಮದ ಬಗ್ಗೆ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಅವರ ಹೆಸರಲ್ಲೇ ಈಶ್ವರ ಇದ್ದಾನೆ. ಪ್ರಕೃತಿಯನ್ನು ಯಾರು ಹುಟ್ಟಿಸಿದ್ದು ಎಂದು ಹೇಳಲಾಗುತ್ತದೆಯೇ? ಪರಮೇಶ್ವರ್ ಗೆ ಮರು ಪ್ರಶ್ನೆ ಹಾಕಿದರು.
ವಿಜಯೇಂದ್ರ ಬಿಜೆಪಿಯಲ್ಲಿ ಕಡೆಗಣನೆ ಮಾಡಲಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ನನಗೆ ಶಿಕಾರಿಪುರದಲ್ಲಿ ಟಿಕೆಟ್ ಕೊಟ್ಟು ಗೆಲ್ಲಿಸಿದೆ. ಇಷ್ಟರ ಮೇಲೂ ನನಗೆ ಅನ್ಯಾಯ ಆಗಿದೆ ಎಂದು ಹೇಳಿದರೆ ಅದಕ್ಕೆ ಅರ್ಥ ಇಲ್ಲ ಎಂದರು.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಗನ ಪರ ಯಡಿಯೂರಪ್ಪ ಪಟ್ಟು ವಿಚಾರವಾಗಿ ಶಾಸಕ ವಿಜಯೇಂದ್ರ ಸ್ಪಷ್ಟನೆ ನೀಡಿ, ಪಕ್ಷದ ರಾಜ್ಯಾಧ್ಯಕ್ಷರು ಯಾರಾಗಬೇಕು, ಯಾವಾಗ ಆಗಬೇಕು ಅಂತ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ.ಆದರೆ ವಿನಾಕಾರಣ ಮಾಧ್ಯಮಗಳಲ್ಲಿ ಯಡಿಯೂರಪ್ಪನಿಂದ ಪುತ್ರ ವಿಜಯೇಂದ್ರಗೆ ರಾಜ್ಯಾಧ್ಯಕ್ಷದ ಪಟ್ಟು ಹಿಡಿದಿದ್ದಾರೆ ಎಂಬ ಸುದ್ದಿ ಬರುತ್ತಿದೆ.ಇದು ಸತ್ಯಕ್ಕೆ ದೂರವಾದ ವಿಚಾರ.ಈ ತರಹದ ಚರ್ಚೆ ಅನಾವಶ್ಯಕ.ಇದು ಕಾರ್ಯಕರ್ತರನ್ನು ಗೊಂದಲಕ್ಕೆ ಈಡು ಮಾಡುತ್ತದೆ. ಯಾರು ಪಕ್ಷದಲ್ಲಿ ಹಗಲು ರಾತ್ರಿ ದುಡಿಯಲು ತಯಾರಿದ್ದಾರೆಯೋ ಅವರ ಬೆನ್ನು ತಟ್ಟುವ ಕೆಲಸ ಯಡಿಯೂರಪ್ಪ ಮಾಡಿದ್ದಾರೆ ಎಂದರು.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ ಎನ್ನುವ ವಿಚಾರ ಪ್ರಶ್ನೆಯೇ ಉದ್ಭವ ಆಗುವುದಿಲ್ಲ. ಇದರ ಬಗ್ಗೆ ವರಿಷ್ಠರ ಜತೆ ಯಡಿಯೂರಪ್ಪ ಚರ್ಚೆ ಮಾಡಿಲ್ಲ.ಒಂದು ವೇಳೆ ಚರ್ಚೆ ಮಾಡಿದ್ದರೂ ಪಕ್ಷಕ್ಕೆ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಕೊಡಿ ಎನ್ನುತ್ತಾರೆಯೇ ಹೊರತು ತಮ್ಮ ಮಗನಿಗೆ ಕೊಡಿ ಎಂದು ಕೇಳುವುದಿಲ್ಲ.ಇದು ಸತ್ಯಾಂಶಕ್ಕೆ ದೂರವಾದ ವಿಷಯ ಎಂದರು.