ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರೆಂಟಿ ದೋಖಾ, ವರ್ಗಾವಣೆ ದಂಧೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ ವಾಗ್ದಾಳಿ - Mahanayaka

ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರೆಂಟಿ ದೋಖಾ, ವರ್ಗಾವಣೆ ದಂಧೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ ವಾಗ್ದಾಳಿ

basavaraj bommai bjp
08/09/2023


Provided by

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರೆಂಟಿ ಗಳ ಹೆಸರಲ್ಲಿ ದೋಖಾ, ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹರಾಜು ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ವೈಫಲ್ಯಗಳ ವಿರೋಧಿಸಿ ರಾಜ್ಯ ಬಿಜೆಪಿ ವತಿಯಿಂದ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸರ್ವೋಚ್ಚ ನಾಯಕ ಯಡಿಯೂರಪ್ಪ ಅವರ ನೇತರತ್ವದಲ್ಲಿ ಸರ್ಕಾರದ ವಿರುದ್ದ ರಣಕಹಳೆ ಊದಿದ್ದೇವೆ.‌ ಇದನ್ನು ಮುಂದಿನ ಒಂದುವರ್ಷ ರಾಜ್ಯದ ಎಲ್ಲ ಮನೆಗಳಿಗೆ ತಲುಪಿಸಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಹೋರಾಟ ಆರಂಭಿಸಿದ್ದೇವೆ ಎಂದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನವರು, ಗ್ಯಾರೆಂಟಿಗಳ ಹೆಸರಿನಲ್ಲಿ ಸಹಿ ಮಾಡಿ ಕೊಟ್ಟರು, ಅದರೆ, ಈಗ ಯಾವುದೂ ಸಮರ್ಪಕ ಜಾರಿಮಾಡಿಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಇವರು ಕೊಡುತ್ತಿರುವ ಐದು ಕೆಜಿ ಅಕ್ಕಿ ನರೇಂದ್ರ ಮೋದಿಯವರು ಕೊಡುತ್ತಿದ್ದಾರೆ.  ಅಕ್ಕಿ ಬದಲು ಹಣ ಕೊಡುತ್ತೇವೆ ಅಂತ ಹೇಳಿ, ಗ್ರಾಮೀಣ ಮಹಿಳೆಯ ಅರ್ಧ ದಿನದ ಕೂಲಿಯಷ್ಟು ಹಣ ಕೊಡುತ್ತಿಲ್ಲ. ಅನ್ನ ಭಾಗ್ಯದಲ್ಲಿ ದ್ರೋಹ ಮಾಡಿದ್ದಾರೆ‌ ಎಂದು ವಾಗ್ದಾಳಿ ನಡೆಸಿದರು.

ನವೆಂಬರ್ ಗೆ ರಾಜ್ಯ ಕತ್ತಲೆ:

ರಾಜ್ಯದಲ್ಲಿ 200 ಯುನಿಟ್ ಫ್ರೀ ಕರೆಂಟ್ ಕೊಡುವುದಾಗಿ ಹೇಳಿ ಈಗ ರಾಜ್ಯದಲ್ಲಿ ಕರೆಂಟ್ ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಝಿರೊ ಕರೆಂಟ್ ಝಿರೊ ಬಿಲ್ ಯೋಜನೆ ಜಾರಿಗೆ ಬರುತ್ತದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ನವೆಂಬರ್ ನಿಂದ ರಾಜ್ಯದಲ್ಲಿ ಕತ್ತಲೆ ಆವರಿಸುತ್ತದೆ ಎಂದರು.

ಅಧಿಕಾರಿಗಳ ಹರಾಜು:

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂರು ತಿಂಗಳಲ್ಲಿ ಭ್ರಷ್ಟಾಚಾರ ಜೋರಾಗಿದೆ. ಅಧಿಕಾರಿಗಳ ಹುದ್ದೆ ಹರಾಜು ಆಗುತ್ತಿವೆ. ವಿಧಾನಸೌಧ, ಕುಮಾರಕೃಪಾದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಅಂತ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಬೆಂಗಳೂರಿನ ಹೊರ ವಲಯದ ಅಧಿಕಾರಿ ವರ್ಗಾವಣೆಗೆ 8 ಕೊಟ್ಟವನು ಬಿಟ್ಟು ಹೋದ ಮೇಲೆ ಅದೇ ಹುದ್ದೆಗೆ 13 ಕೋಟಿಗೆ ಹರಾಜಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರನ್ನು ಸಣ್ಣ ಪುಟ್ಟ ವಿಷಯಗಳಿಗೆ ಬಂಧನ ಮಾಡುತ್ತಿದ್ದಾರೆ. ಹಾಸನದ ಕಾರ್ಯಕರ್ತರನ್ನು ಬೆಂಗಳೂರಿಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ‌. ಪೊಲಿಸ್  ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಬೇಕು. ಮೂರು ತಿಂಗಳಲ್ಲಿ 172 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂತ್ರಿಗಳು ರೈತರು ಐದು ಲಕ್ಷ ಪರಿಹಾರಕ್ಕಾಗಿ ಸಾಯುತ್ತಾರೆ ಎಂದು ಹೇಳಿದ್ದಾರೆ. ಯಾರಾದರೂ ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ? ಯಡಿಯೂರಪ್ಪ ಅವರ ಕಾಲದಲ್ಲಿ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಪ್ರಧಾನಮಂತ್ರಿ ‌ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ರೈತರಿಗೆ ನಾಲ್ಕು ಸಾವಿರ ರೂ ಕೊಡುವುದನ್ನು ನಿಲ್ಲಿಸಿದ್ದಾರೆ. ನಾನು ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆ ರದ್ದುಪಡಿಸಿದ್ದಾರೆ ಎಂದರು

ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ನೀಚರು ಅಂತ ಹೇಳುತ್ತಾರೆ. ನೀವು ಒಂದು ಅಗಳು ಅಕ್ಕಿಯನ್ನು ನೀಡಿಲ್ಲ. ಜನರಿಗೆ ಅಕ್ಕಿ ಕೊಡುತ್ತಿರುವ ಮೋದಿಯವರು ನೀಚರಾ? ಒಂದು ಕಾಳು ಅಕ್ಕಿ ಕೊಡದ ನಿವು  ನೀಚರಾ ಅಂತ ರಾಜ್ಯದ ಜನರು ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.‌ಯಡಿಯೂರಪ್ಪ, ಡಿ.ವಿ. ಸದಾನಂದಗೌಡ , ಮಾಜಿ ಸಚಿವರಾದ ಆರ್ ಅಶೋಕ್, ಗೋಪಾಲಯ್ಯ, ಮುನಿರತ್ನ, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮಾಜಿ ಸಚಿವರು ಶಾಸಕರು ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ